ಮೊಬೈಲ್, ಅಂತರ್ಜಾಲದಿಂದ ಓದುವ ಹವ್ಯಾಸ ದೂರ: ವಿ.ಜಿ.ಲಾಂಜೇಕರ್
ಅಂಕೋಲಾ, ಜು.21: ಮೊಬೈಲ್ ಮತ್ತು ಅಂತರ್ಜಾಲದ ಸುಳಿಯಲ್ಲಿ ಸಿಲುಕಿ ವಿದ್ಯಾರ್ಥಿಗಳು ಇಂದು ಓದುವ ಹವ್ಯಾಸದಿಂದ ದೂರ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತಹಶೀಲ್ದಾರ್ ವಿ.ಜಿ.ಲಾಂಜೇಕರ್ ಹೇಳಿದರು. ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ನ ಅಂಕೋಲಾ ತಾಲೂಕು ಘಟಕ, ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಪುತ್ತೂರಿನ ದೀಪಾ ಬುಕ್ ಹೌಸ್ ಜಂಟಿ ಆಶ್ರಯದಲ್ಲಿ ಜು.21ರಿಂದ 31ರವರೆಗೆ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿರುವ ಪುಸ್ತಕ ಹಬ್ಬ(ಪುಸ್ತಕ ಪ್ರದರ್ಶನ ಮತ್ತು ಮಾರಾಟ)ವನ್ನು ಉದ್ಘಾಟಿಸಿ ಮಾತನಾಡಿದರು. ಓದು ಮಕ್ಕಳ ಪಾಲಿಗೆ ಜ್ಞಾನ ಭಂಡಾರವಿದ್ದಂತೆ. ಓದುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕೈಯಲ್ಲಿ ಇರುವ ಹಣ ಪುಸ್ತಕ ಖರೀದಿಗೆ ಬಳಸಿ ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿ ತಾಪಂ ಅಧ್ಯಕ್ಷೆ ಸುಜಾತಾ ಗಾಂವ್ಕರ್ ಮಾತನಾಡಿ, ಮಕ್ಕಳಲ್ಲಿ ಓದುವ ಅಭಿರುಚಿ ಹೆಚ್ಚಿಸುವ ಕಾರ್ಯ ಆಗಬೇಕಿದೆ. ಇಂತಹ ಪುಸ್ತಕ ಪ್ರದರ್ಶನಗಳು ಸಹಕಾರಿಯಾಗಿದ್ದು, ಎಲ್ಲ ಶಾಲಾ ಕಾಲೇಜುಗಳು ಇದರ ಪ್ರಯೋಜನ ಪಡೆಯಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯಕ, ದೀಪಾ ಬುಕ್ ಹೌಸ್‌ನ ಎಂ ಸತ್ಯಮೂರ್ತಿ ಹೆಬ್ಬಾರ್, ಹಿರಿಯ ಸಾಹಿತಿ ವಿ.ಜೆ.ನಾಯಕ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಅರವಿಂದ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಗೌರೀಶ ನಾಯಕ ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ದಾಮೋದರ್ ನಾಯ್ಕ ಸ್ವಾಗತಿಸಿದರು. ಎನ್ನೆಸ್ಸೆಸ್ ಘಟಕಾಧಿಕಾರಿ ಭಾರತಿ ನಾಯಕ ನಿರ್ವಹಿಸಿ, ತಿಮ್ಮಣ್ಣ ಭಟ್ ವಂದಿಸಿದರು.