×
Ad

ಶಿವಮೊಗ್ಗ: ಭರ್ತಿಯಾಗದ ತಹಶೀಲ್ದಾರ್ ಹುದ್ದೆಗಳು

Update: 2016-07-21 21:51 IST

ಶಿವಮೊಗ್ಗ, ಜು. 21: ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ತವರೂರು ಶಿವಮೊಗ್ಗ ಜಿಲ್ಲೆಯ ಒಟ್ಟು ಏಳು ತಾಲೂಕುಗಳ ಪೈಕಿ ನಾಲ್ಕು ತಾಲೂಕು ಕೇಂದ್ರಗಳಲ್ಲಿ ಖಾಯಂ ತಹಶೀಲ್ದಾರ್ ಹುದ್ದೆಗಳು ಖಾಲಿಯಾಗಿದ್ದು, ಇದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳಲ್ಲಿ ಮಾತ್ರ ಖಾಯಂ ತಹಶೀಲ್ದಾರ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಉಳಿದಂತೆ ಶಿವಮೊಗ್ಗ, ಸೊರಬ, ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಖಾಯಂ ತಹಶೀಲ್ದಾರ್‌ಗಳಿಲ್ಲ. ಕೆಳಹಂತದ ಅಧಿಕಾರಿಗಳಿಗೆ ಪ್ರಭಾರ ತಹಶೀಲ್ದಾರ್ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಈ ನಡುವೆ ಸಚಿವ ಕಾಗೋಡು ತಿಮ್ಮಪ್ಪ ಪ್ರತಿನಿಧಿಸುತ್ತಿರುವ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸನಗರ ತಹಶೀಲ್ದಾರ್ ಕೂಡ ಕೆಲ ದಿನಗಳಲ್ಲಿಯೇ ವಯೋನಿವೃತ್ತಿ ಹೊಂದುತ್ತಿದ್ದು, ಅಲ್ಲಿನ ತಹಶೀಲ್ದಾರ್ ಹುದ್ದೆ ಕೂಡ ಖಾಲಿ ಬೀಳುತ್ತಿದೆ. ಅಗತ್ಯವಿದೆ:

ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಏಕವ್ಯಕ್ತಿ ಪೋಡಿ ಪ್ರಕರಣದಲ್ಲಿ ತಹಶೀಲ್ದಾರ್‌ಗಳಿಗೆ ನಿರ್ಧಾರ ಕೈಗೊಳ್ಳುವ ಮಹತ್ವದ ಆದೇಶ ಕೂಡ ಹೊರಡಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುತ್ತಿದ್ದಾರೆ. ಆದರೆ ಅವರ ತವರೂರಿನ ಐದು ಪ್ರಮುಖ ಆಡಳಿತ ಕೇಂದ್ರಗಳಲ್ಲಿ ಖಾಯಂ ತಹಶೀಲ್ದಾರ್‌ಗಳಿಲ್ಲ. ಸರಕಾರವು ಖಾಲಿಯಿರುವ ಹುದ್ದೆಗಳ ಭರ್ತಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಕಡತಗಳ ವಿಲೇವಾರಿಯ ಮೇಲೆ ಪರಿಣಾಮ ಬೀರುವಂತಾಗಿದ್ದು, ನಾಗರಿಕರು ತಾಲೂಕು ಕಚೇರಿ ಅಲೆದಾಡುವಂತಾಗಿದೆ. ಪ್ರಭಾರ ತಹಶೀಲ್ದಾರ್‌ಗಳು ಪೂರ್ಣ ಪ್ರಮಾಣದಲ್ಲಿ ಖಾಯಂ ತಹಶೀಲ್ದಾರ್‌ಗಳ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಿಲ್ಲವಾಗಿದೆ. ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ಅವರಿಗಿಲ್ಲವಾಗಿದೆ. ಇದರಿಂದ ತಾಲೂಕು ಆಡಳಿತದ ಕಾರ್ಯವೈಖರಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಿಶೇಷವಾಗಿ ರೈತಾಪಿ ಹಾಗೂ ಇತರ ವರ್ಗಕ್ಕೆ ತೀವ್ರ ತೊಂದರೆ ಉಂಟಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕಂದಾಯ ಇಲಾಖೆಯ ಅಧಿಕಾರಿಯೋರ್ವರು ಹೇಳುತ್ತಾರೆ. ಕ್ರಮಕೈಗೊಂಡಿದ್ದಾರೆ:

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ರವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಯಾವ ತಾಲೂಕುಗಳಲ್ಲಿ ಖಾಯಂ ತಹಶೀಲ್ದಾರ್‌ಗಳಿಲ್ಲ ಎಂಬ ಸ್ಪಷ್ಟ ಮಾಹಿತಿ ತಮ್ಮ ಬಳಿಯಿಲ್ಲ. ವಿವಿಧ ಕಾರಣಗಳಿಂದ ಖಾಯಂ ತಹಶೀಲ್ದಾರ್‌ಗಳಿಲ್ಲದ ತಾಲೂಕು ಕಚೇರಿಗಳಿಗೆ ಪ್ರಭಾರ ತಹಶೀಲ್ದಾರ್‌ಗಳ ನಿಯೋಜನೆಯನ್ನು ಜಿಲ್ಲಾಡಳಿತ ಮಾಡಿದೆ ಎಂದರು. ಕ

್ಟ: ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸಲು ಕಾಗೋಡು ತಿಮ್ಮಪನವರು ಮೊದಲಿನಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರೇ ಕಂದಾಯ ಸಚಿವರೂ ಆಗಿದ್ದು, ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಗೆ ವೇಗ ದೊರಕಿದೆ. ಆದರೆ ಐದು ತಾಲೂಕು ಕೇಂದ್ರಗಳಲ್ಲಿ ಖಾಯಂ ತಹಶೀಲ್ದಾರ್‌ಗಳಿಲ್ಲದೆ ಇರುವುದರಿಂದ ಮುಂದಿನ ದಿನಗಳಲ್ಲಿ ಸಾಗುವಳಿ ಚೀಟಿ ನೀಡುವ ಕಾರ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಐದು ತಾಲೂಕು ಕಚೇರಿಗಳಿಗೆ ಖಾಯಂ ತಹಶೀಲ್ದಾರ್‌ಗಳ ನಿಯೋಜನೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ಮೂಲಕ ತಾಲೂಕು ಆಡಳಿತದ ಕೆಲಸ ಕಾರ್ಯಗಳಿಗೆ ಮತ್ತಷ್ಟು ವೇಗ ದೊರಕಿಸುವ ಕೆಲಸ ಮಾಡಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News