×
Ad

ಎಪಿಕ್ ಕಾರ್ಡ್ ಪಡೆಯಲು ನಾಗರಿಕರ ಪರದಾಟ

Update: 2016-07-21 22:06 IST

ಶಿವಮೊಗ್ಗ, ಜು. 21: ಪ್ರಸ್ತುತ ಚುನಾವಣಾ ಆಯೋಗ ನೀಡುವ ಭಾವಚಿತ್ರ ಸಹಿತ ಗುರುತಿನ ಚೀಟಿ (ಎಪಿಕ್ ಕಾರ್ಡ್) ಪ್ರತಿಯೋರ್ವ ನಾಗರಿಕನಿಗೂ ಅತ್ಯಂತ ಆವಶ್ಯಕವಾಗಿ ಪರಿಣಮಿಸಿದೆ. ಕೇವಲ ಮತದಾನಕ್ಕೆ ಮಾತ್ರವಲ್ಲದೆ ಸರಕಾರದ ವಿವಿಧ ಸೌಲಭ್ಯಗಳು ಮತ್ತು ವಿವಿಧ ಕೆಲಸ ಕಾರ್ಯಗಳಿಗೆ ಎಪಿಕ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ಶಿವಮೊಗ್ಗ ನಗರದಲ್ಲಿ ಹಾಲೋಗ್ರಾಂ ಸ್ಟಿಕ್ಕರ್ ಕೊರತೆಯಿಂದ ಕಳೆದ ಕೆಲ ದಿನಗಳಿಂದ ಎಪಿಕ್ ಕಾರ್ಡ್ ವಿತರಣೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಎಪಿಕ್ ಕಾರ್ಡ್ ಪಡೆಯಲು ನಾಗರಿಕರು ಮಹಾನಗರ ಪಾಲಿಕೆ ಕಚೇರಿಗೆ ದಿನನಿತ್ಯ ಸುತ್ತಾಡುವಂತಾಗಿದೆ. ಸಕಾಲದಲ್ಲಿ ಎಪಿಕ್ ಕಾರ್ಡ್ ಪಡೆಯಲು ಸಾಧ್ಯವಾಗದೆ ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಎಪಿಕ್ ಕಾರ್ಡ್ ವಿತರಣೆ ಮಾಡುವ ಸಂಪೂರ್ಣ ಜವಾಬ್ದಾರಿ ಮಹಾನಗರ ಪಾಲಿಕೆ ಆಡಳಿತ ನೋಡಿಕೊಳ್ಳುತ್ತಿದೆ. ಇದಕ್ಕಾಗಿಯೇ ಪಾಲಿಕೆಯಲ್ಲಿ ಚುನಾವಣಾ ವಿಭಾಗದ ಪ್ರತ್ಯೇಕ ಕಚೇರಿ, ಸಿಬ್ಬಂದಿ ವರ್ಗವಿದೆ. ಹಿರಿಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕಾರ್ಯಗಳು ನಡೆಯುತ್ತವೆ.

ಸುಮಾರು ಹದಿನೈದು ದಿನಗಳಿಂದ ಪಾಲಿಕೆಯ ಚುನಾವಣಾ ವಿಭಾಗದಲ್ಲಿ ಹಾಲೋಗ್ರಾಂ ಸ್ಟಿಕ್ಕರ್‌ಗಳು ಖಾಲಿಯಾಗಿವೆ. ಈ ಕುರಿತಂತೆ ಜಿಲ್ಲಾ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನಿಸಿದ್ದರೂ ಈ ವರೆಗೂ ಪೂರೈಕೆಯಾಗಿಲ್ಲ. ಇದರಿಂದ ಎಪಿಕ್ ಕಾರ್ಡ್ ವಿತರಣೆ ಮಾಡುತ್ತಿಲ್ಲ. ಸ್ಟಿಕ್ಕರ್ ಬರುತ್ತಿದ್ದಂತೆ ಎಪಿಕ್ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಾಲಿಕೆಯ ಆಡಳಿತ ಮೂಲಗಳು ಹೇಳುತ್ತವೆ. ಪರದಾಟ: ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಾಯಿಸಿದವರು, ತಿದ್ದುಪಡಿ ಮಾಡುವವರು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರಿಗೆ ಹೊಸದಾಗಿ ಎಪಿಕ್ ಕಾರ್ಡ್ ನೀಡಲಾಗುತ್ತದೆ. ಇದೀಗ ಕಾರ್ಡ್‌ಗಳ ವಿತರಣೆ ಸ್ಥಗಿತಗೊಂಡಿರುವುದರಿಂದ ಜನತೆ ತೀವ್ರ ತೊಂದರೆ ಎದುರಿಸುವಂತಾಗಿದೆ.

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ. ತಮ್ಮ ಎಪಿಕ್ ಕಾರ್ಡ್‌ನಲ್ಲಿ ಹೆಸರು ದೋಷವಿದ್ದುದರಿಂದ ತಿದ್ದುಪಡಿಗೆ ಅರ್ಜಿ ಕೊಟ್ಟು, ಹೊಸ ಎಪಿಕ್ ಕಾರ್ಡ್ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಆದರೆ, ಹಾಲೋಗ್ರಾಂ ಸ್ಟಿಕ್ಕರ್ ಇಲ್ಲವೆಂದು ಹದಿನೈದು ದಿನಗಳಿಂದಲೂ ಕಚೇರಿಗೆ ಅಲೆದಾಟಿ ಸುಸ್ತಾಗಿ. ಈ ವರೆಗೂ ಎಪಿಕ್ ಕಾರ್ಡ್ ನೀಡಿಲ್ಲ. ಇದರಿಂದ ತಮಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ನಾಗರಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಏನಿದು ಹಾಲೋಗ್ರಾಂ?: ನ

ಕಲಿ ಎಪಿಕ್ ಕಾರ್ಡ್‌ಗಳ ಹಾವಳಿ ತಡೆಗಟ್ಟಲು ಚುನಾವಣಾ ಆಯೋಗವು ರಾಜ್ಯದ ಹೆಸರು, ರಾಷ್ಟ್ರ ಚಿಹ್ನೆ, ಕೋಡ್ ಸಂಖ್ಯೆ ಇರುವ ಹಾಲೋಗ್ರಾಂ ಸ್ಟಿಕ್ಕರ್‌ನ್ನು ಎಪಿಕ್ ಕಾರ್ಡ್‌ಗಳ ಮೇಲೆ ಅಂಟಿಸುವುದನ್ನು ಕಡ್ಡಾಯಗೊಳಿಸಿದೆ. ಸ್ಟಿಕ್ಕರ್ ಹೊಂದಿರುವ ಎಪಿಕ್ ಕಾರ್ಡ್‌ಗಳು ಮಾತ್ರ ಮಾನ್ಯತೆ ಹೊಂದಿರುತ್ತವೆ. ಚುನಾವಣಾ ಆಯೋಗವೇ ಈ ವಿಶಿಷ್ಟ ಹಾಲೋಗ್ರಾಂ ಸ್ಟಿಕ್ಕರ್ ರೂಪಿಸಿ ಜಿಲ್ಲಾ ಚುನಾವಣಾ ಶಾಖೆಗಳಿಗೆ ರವಾನಿ ಸುತ್ತದೆ. ಅಲ್ಲಿಂದ ಸ್ಥಳೀಯಾಡಳಿತ, ಚುನಾವಣಾ ಶಾಖೆಗಳಿಗೆ ಪೂರೈಕೆಯಾಗುತ್ತದೆ. ಹಾಲೋಗ್ರಾಂ ಸ್ಟಿಕ್ಕರ್ ಕೊರತೆಯಿಂದ ಎಪಿಕ್ ಕಾರ್ಡ್ ವಿತರಣೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಹಲವರು ತಮ್ಮ ಬಳಿ ದೂರು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪರವರೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಾಲೋಗ್ರಾಂ ಸ್ಟಿಕ್ಕರ್‌ಗಳ ರವಾನೆಗೆ ಕ್ರಮಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಒಂದೆರೆಡು ದಿನಗಳಲ್ಲಿ ಎಪಿಕ್ ಕಾರ್ಡ್ ವಿತರಣೆಯಲ್ಲಾಗುತ್ತಿರುವ ವಿಳಂಬ ತಪ್ಪಲಿದೆ.

<ಐಡಿಯಲ್ ಗೋಪಿ

ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರು.

ಸಕಾಲದಲ್ಲಿ ಹಾಲೋಗ್ರಾಂ ಸ್ಟಿಕ್ಕರ್ ಪೂರೈಕೆ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿ. ಸ್ಟಿಕ್ಕರ್ ಕೊರತೆಯಿಂದ ಎಪಿಕ್ ಕಾರ್ಡ್ ವಿತರಣೆಯಲ್ಲಿ ತೀವ್ರ ವಿಳಂಬವಾಗುತ್ತಿದೆ. ಇದರಿಂದ ನಾಗರಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಪ್ರತಿನಿತ್ಯ ಪಾಲಿಕೆಯ ಚುನಾವಣಾ ವಿಭಾಗಕ್ಕೆ ಅಲೆದಾಡುವಂತಾಗಿದೆ. ತಕ್ಷಣವೇ ಜಿಲ್ಲಾಡಳಿತ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯ ವತಿಯಿಂದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ.

<ಜಾನಕಿ ಅಚನೂರು

ಕರ್ನಾಟಕ ರಕ್ಷಣಾ ವೇದಿಕೆ ಮುಖಂಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News