×
Ad

ಶುಚಿತ್ವ ಕಾಪಾಡಲು ಅಧಿಕಾರಿಗಳಿಗೆ ಪಾಠ

Update: 2016-07-21 22:08 IST

ಶಿವಮೊಗ್ಗ, ಜು. 21: ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ಹೊಸನಗರ ಪಟ್ಟಣದ ಎರಡು ಸರಕಾರಿ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಹಾಸ್ಟೆಲ್‌ಗಳಲ್ಲಿ ಕಂಡು ಬಂದ ಅವ್ಯವಸ್ಥೆಯ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ.

ಸರಕಾರಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಿಗೆ ಜಿಲ್ಲಾಧಿಕಾರಿಯವರ ದಿಢೀರ್ ಭೇಟಿ ಭೇಟಿಯಿಂದ ಎರಡೂ ಹಾಸ್ಟೆಲ್‌ಗಳ ಸಿಬ್ಬಂದಿ ಕೆಲ ಸಮಯ ತಬ್ಬಿಬ್ಬುಗೊಂಡರು.

ಎಚ್ಚರಿಕೆ: ಡಿ.ಸಿ. ಯವರು ಎರಡೂ ಹಾಸ್ಟೆಲ್‌ಗಳ ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವು ಅವ್ಯವಸ್ಥೆಗಳು ಅವರ ಗಮನಕ್ಕೆ ಬಂದಿವೆ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡು ಹರಿಹಾಯ್ದಿದ್ದಾರೆ. ಪಾತ್ರೆಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿರುವುದು, ಅಡುಗೆ ಮನೆಗಳಲ್ಲಿ ಅಸ್ವಚ್ಛತೆಯ ವಾತಾವರಣವಿರುವುದು, ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಶೇಖರಿಸಿಡದಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಳಿಕ ವಿದ್ಯಾರ್ಥಿನಿಯರಿಗೆ ತಯಾರಿಸಲಾಗಿದ್ದ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿನಿಯರ ಸಂಖ್ಯೆ, ಬಿಡುಗಡೆಯಾಗುವ ಆಹಾರ ಪದಾರ್ಥಗಳ ಬಗ್ಗೆ ಸವಿವರವಾದ ಮಾಹಿತಿ ಪಡೆದುಕೊಂಡಿದ್ದಾರೆ.

 ಊಟೋಪಚಾರದಲ್ಲಿ ಗುಣ ಮಟ್ಟ ಕಾಯ್ದುಕೊಳ್ಳುವಂತೆ ಸಿಬ್ಬಂ ದಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ ಅವರು, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ, ಎಚ್ಚರಿಕೆಯಿಂದ ಕಾರ್ಯನಿರ್ವಹಣೆ ಮಾಡುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ಇದೇ ವೇಳೆ ವಿದ್ಯಾರ್ಥಿನಿಯರೊಂದಿಗೆ ಸಮಾ ಲೋಚನೆ ನಡೆಸಿ, ಹಾಸ್ಟೆಲ್‌ಗಳಲ್ಲಿ ದೊರಕುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನೆರವು: ಹಾಸ್ಟೆಲ್‌ಗಳಲ್ಲಿ ನಡೆಯ ಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತಂತೆ ಸವಿವರವಾದ ಮಾಹಿತಿ ತಮಗೆ ಕಳುಹಿಸಿ ಕೊಡುವಂತೆ ಹಾಸ್ಟೆಲ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಅಗತ್ಯ ಹಣಕಾಸಿನ ನೆರವು ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿಯವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಡಿ.ಸಿ. ಪ್ರಶ್ನೆಗೆ ಉತ್ತರಿಸಲು ತಡಕಾಡಿದ ವಿದ್ಯಾರ್ಥಿನಿಯರು...!: ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಯವರು, ಸಾಮಾನ್ಯ ಜ್ಞಾನ ಸೇರಿದಂತೆ ಪಠ್ಯಪುಸ್ತಕದ ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಜಿಲ್ಲಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿನಿಯರು ಉತ್ತರಿಸಲು ತಡಕಾಡಿದ ಪ್ರಸಂಗವೂ ನಡೆಯಿತು.

ವಿದ್ಯಾರ್ಥಿನಿಯರ ಶೈಕ್ಷಣಿಕ ಚಟುವಟಿಕೆ ಉತ್ತಮಗೊಳಿಸುವತ್ತ ಗಮನಹರಿಸುವಂತೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ಗಳಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಹಣಕಾಸಿನ ಅಗತ್ಯವಿದ್ದರೆ ತಮಗೆ ಮಾಹಿತಿ ನೀಡುವಂತೆ ಹಾಸ್ಟೆಲ್ ವಾರ್ಡನ್‌ಗಳಿಗೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News