×
Ad

ವಸತಿ ಕಲ್ಪಿಸಿಕೊಡುವಂತೆ ಆಗ್ರಹಿಸಿ ಧರಣಿ

Update: 2016-07-21 22:11 IST

ಮೂಡಿಗೆರೆ, ಜು.21: ಜಿಲ್ಲೆಯಲ್ಲಿ ಶೇ.70ರಷ್ಟು ದುಡಿಯುವ ವರ್ಗ ಜೀವನ ಮಾಡುತ್ತಿದ್ದು, ಇವರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲದೆ ಕಷ್ಟದ ಜೀವನ ಮಾಡುವಂತಾಗಿದೆ ಎಂದು ವಸತಿಗಾಗಿ ಹೋರಾಟ ಸಮಿತಿ ಅಧ್ಯಕ್ಷ ಬಿ.ರುದ್ರಯ್ಯ ಹೇಳಿದ್ದಾರೆ.

ಅವರು ಗುರುವಾರ ವಸತಿಗಾಗಿ ಹೋರಾಟ ಸಮಿತಿ ವತಿಯಿಂದ ವಸತಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಹಳೆಮೂಡಿಗೆರೆ ಸರ್ವೋದಯ ನಗರದಿಂದ ಮೆರವಣಿಗೆ ಮುಖಾಂತರ ಕಚೇರಿಯಲ್ಲಿ ನಡೆಸಿದ ಧರಣಿಯಲ್ಲಿ ಮಾತನಾಡಿ, ತಾಲೂಕಿನ ಹಳೆ ಮೂಡಿಗೆರೆ, ಹ್ಯಾಂಡ್‌ಪೋಸ್ಟ್, ಕೃಷ್ಣಾಪುರ ನಿವಾಸಿಗಳು ಹತ್ತಾರು ಬಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು.

ಸರ್ವೇ ನಂ 1ರಲ್ಲಿ 140 ಎಕರೆ, ಸರ್ವೇ ನಂ 289ರಲ್ಲಿ 33 ಎಕರೆ, ಸರ್ವೇ ನಂ 7ರಲ್ಲಿ 11 ಎಕರೆ ಗೋಮಾಳವಿದ್ದು, ಈ ಭೂಮಿ ಹಂಚಿಕೆ ಮಾಡಿದ್ದಲ್ಲಿ ಪಂಚಾಯತ್‌ನ 400 ಕುಟುಂಬಗಳಿಗೆ ವಸತಿ ಕಲ್ಪಿಸಿಕೊಟ್ಟಂತಾಗುತ್ತದೆ. ಇಂದು ಜಿಲ್ಲೆಯಲ್ಲಿ ಗೋಮಾಳ, ಸರಕಾರಿ ಜಾಗಗಳು ಭೂ ಮಾಲಕರ ವಶದಲ್ಲಿದ್ದು, ಇದೆಲ್ಲಾ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ಬಡವರ ಪರವಾಗಿ ಹೋರಾಟ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ರವರ ಶತಮಾನೋತ್ಸವ ಅದ್ದೂರಿಯಾಗಿ ನಡೆಸಲು ಸಿದ್ಧ್ದತೆ ನಡೆಯುತ್ತಿದ್ದು, ಶತಮಾನೋತ್ಸವ ಸುಸಂದರ್ಭದಲ್ಲಿ ಅವರ ಆಶಯದಂತೆ ಎಲ್ಲಾ ವಸತಿಹೀನರಿಗೆ ವಸತಿ ಕಲ್ಪಿಸುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು. ಧರಣಿಯಲ್ಲಿ ವಸತಿಗಾಗಿ ಹೋರಾಟ ಸಮಿತಿಯ ರವಿ ಪೂಜಾರಿ, ಗೋಪಾಲ್, ದಯಾನಂದ್, ಶಿವಪ್ಪ, ಲಕ್ಷ್ಮೀ, ಪುಷ್ಪಾ, ರುಕ್ಮಿಣಿ, ಶಲ್ಲಿಕಾ, ಪಾರ್ವತಿ, ಸುಜಾತಾ, ವಿಜಯ, ನಾಗೇಶ್, ಶಂಕರ್ ಮತ್ತಿತತರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ದಾವಣಗೆರೆ, ಜು.21: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಬಳಿ ಗುರುವಾರ ಧರಣಿ ನಡೆಸಲಾಯಿತು. ಧರಣಿ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಕಳೆದ ಎಲ್ಲಾ ಸರಕಾರಗಳು ಭದ್ರಾ ಜಲಾಶಯದಲ್ಲಿ 140 ಅಡಿ ನೀರಿದ್ದಾಗ ಭತ್ತ ಬೆಳೆಯಲು ನೀರು ಹರಿಸಿದ್ದಾರೆ. ಇದೀಗ 145 ಅಡಿ ನೀರಿದ್ದರೂ ಕಾಡಾ ಅಧ್ಯಕ್ಷರು ಕಾಲುವೆಗೆ ನೀರು ಹರಿಸಲು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ಬೇಸಿಗೆ ಬೆಳೆಯೂ ಇಲ್ಲದೆ, ಮಳೆಗಾಲದ ಬೆಳೆಗೆ ನೀರು ಸಕಾಲಕ್ಕೆ ಹರಿಸದಿದ್ದಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.ಆದ್ದರಿಂದ ಈ ಕೂಡಲೇ ನೀರು ಹರಿಸಬೇಕು. ಇಲ್ಲದಿದ್ದರೆ ಜು.25ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾ ಗುವುದು ಎಂದು ಎಚ್ಚರಿಸಿದರು. ಬೇರೆ ಜಿಲ್ಲೆಗಳಲ್ಲಿ ತೆಂಗು ಖರೀದಿ ಕೇಂದ್ರಗಳನ್ನು ತೆರೆದಿರುವ ತೋಟಗಾರಿಕೆ ಸಚಿವರಿಗೆ ನಮ್ಮ ಜಿಲ್ಲೆಯಲ್ಲಿಯೂ ತೆಂಗು ಬೆಳೆ ಯುತ್ತಾರೆಂಬ ಮಾಹಿತಿಯೇ ಇದ್ದಂತಿಲ್ಲ. ಅವರು ಕೂಡ ಕೇವಲ ಅಡಿಕೆ ಬೆಳೆಗಾರರು. ಬೇರೆ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆದು ನಮ್ಮ ಜಿಲ್ಲೆಯಲ್ಲಿ ತೆಂಗು ಖರೀದಿ ಕೇಂದ್ರ ತೆರೆಯದೆ ಇರುವುದು ದುರಂತ. ತುರ್ತಾಗಿ ಮೂರು ದಿನಗಳೊಳಗೆ ತೆಂಗು ಖರೀದಿ ಕೇಂದ್ರ ತೆರೆಯಬೇಕು ಮತ್ತು ಭದ್ರಾ ಜಲಾಶಯದ ನೀರನ್ನು ಕೂಡಲೇ ಹರಿಸಬೇಕು ಎಂದರು. ಪ್ರೊ.ನರಸಿಂಹಪ್ಪ ಮಾತನಾಡಿ, ಸರಕಾರ ಮತ್ತು ಅಧಿಕಾರಿಗಳಿಗೆ ಭದ್ರಾ ಕಾಲುವೆಯಲ್ಲಿ ಸಕಾಲಕ್ಕೆ ನೀರು ಹರಿಸುವ ಚಿಂತನೆ ಇದ್ದಂತಿಲ್ಲ. 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕೇವಲ 24.5 ಟಿಎಂಸಿ ನೀರು ಬೇಕಾಗಿದೆ. ಜಲಾಶಯದಲ್ಲಿ 40 ಟಿಎಂಸಿ ನೀರಿದ್ದರೂ ಬಿಡುತ್ತಿಲ್ಲ. ಕೇಳಿದರೆ ಆಗಸ್ಟ್ ತಿಂಗಳಲ್ಲಿ ಬಿಡುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅತೀ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ದಾವಣಗೆರೆ ಪ್ರದೇಶದಲ್ಲಿಯೂ ಕಾಡಾ ಸಭೆ ಕರೆಯದಿರುವುದು ದುರಂತ. ಹೀಗಾಗಿ ರೈತರು ಒಂದು ಬೆಳೆ ಕಳೆದುಕೊಂಡರೆ ಒಂದು ಸಾವಿರ ಕೋಟಿ ರೈತರ ಜೇಬಿಗೆ ಕತ್ತರಿ ಬೀಳುತ್ತದೆ. ಹೀಗಾಗಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕಾಡಾ ಕಚೇರಿಗೆ ಮುತ್ತಿಗೆ ಹಾಕಿದರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಬಸವರಾಜ್ ನಾಯ್ಕ, ಗಂಗಪ್ಪ, ಶಿವಯೋಗಿಸ್ವಾಮಿ, ಬಿಜೆಪಿ ಮುಖಂಡರಾದ ಲೋಕೇಶ್, ವೀರೇಶ್ ಹನಗವಾಡಿ, ಡಾ.ರಾಜ್ ಕುಮಾರ್, ರೈತ ಮುಖಂಡರಾದ ಎಚ್.ಲಿಂಗರಾಜು, ಬಿ.ಎಂ.ಸತೀಶ್, ಸುರೇಶ್, ಹನುಮಂತಪ್ಪ, ರುದ್ರಮುನಿಸ್ವಾಮಿ, ಕಡ್ಲೆಬಾಳು ಧನಂಜು, ಲಕ್ಷ್ಮಣ್ ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News