ಭಟ್ಕಳ: ಕರಾಟೆಯಲ್ಲಿ ಸ್ಥಳೀಯ ಪ್ರತಿಭೆಗಳ ಸಾಧನೆಗೆ ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ್ ಶ್ಲಾಘನೆ
ಭಟ್ಕಳ, ಜು.22: ಕರಾಟೆಯಲ್ಲಿ ಭಟ್ಕಳದ ಪ್ರತಿಭೆಗಳು ಸಾಧನೆ ಮೆರೆಯುತ್ತಿರುವುದು ಶ್ಲಾಘನೀಯ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರು ಇಲ್ಲಿನ ಕಮಲಾವತಿ ರಾಮನಾಥ ಶಾನಭಾಗ ಸಭಾಂಗಣದಲ್ಲಿ ನಡೆದ ಶೊಟೊಕಾನ್ ಕರಾಟೆ ಇನ್‌ಸ್ಟಿಟ್ಯೂಟ್‌ನ 7ನೆ ಬ್ಲಾಕ್ ಬೆಲ್ಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯೂಇಂಗ್ಲೀಷ್ ಶಾಲೆಯ ಮುಖ್ಯ ಶಿಕ್ಷಕ ಎಂ.ಕೆ.ನಾಯ್ಕ ಮಾತನಾಡಿ, ಕರಾಟೆ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿ ಅವರು ಶೈಕ್ಷಣಿಕವಾಗಿ, ದೈಹಿಕವಾಗಿ ಪ್ರಗತಿ ಹೊಂದಲು ಸಹಾಯಕ ಎಂದು ನುಡಿದು, ಬ್ಲಾಕ್ ಬೆಲ್ಟ್ ವಿಜೇತರಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಗುರು ಸುಧೀಂದ್ರ ಬಿಸಿಎ ಬಿಬಿಎ ಕಾಲೇಜಿನ ಪ್ರಾಚಾರ್ಯ ನಾಗೇಶ ಭಟ್ ಮಾತನಾಡಿ, ನಮ್ಮೂರಿನ ಪ್ರತಿಬೆಗಳ ಕರಾಟೆ ಪ್ರದರ್ಶನವನ್ನು ನೋಡಿದರೆ ಎಂಥವರೂ ವಿಸ್ಮಿತರಾಗುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮೂರ ಕರಾಟೆ ಪ್ರತಿಭೆಗಳು ರಾಷ್ಟ ಮಟ್ಟದಲ್ಲಿ ಬೆಳಗುವಂತಾಗಲೆಂದು ಹಾರೈಸಿದರು.
ಬೀನಾ ವೈದ್ಯ ಶಾಲೆಯ ಎಂ.ಡಿ.ಪುಷ್ಪಲತಾ ಮಾತನಾಡಿ, ವಿವಿದ ಕಡೆಗಳಲ್ಲಿ ಕರಾಟೆ ತರಗತಿಗಳನ್ನು ನಡೆಸಿ ಅನೇಕ ಕರಾಟೆ ಪಟುಗಳನ್ನು ತರಬೇತುಗೊಳಿಸಿ ಇಂದು ಬ್ಲಾಕ್‌ಬೆಲ್ಟ್ ಪಡೆಯುವಂತೆ ಮಾಡಿದ ವಾಸು ನಾಯ್ಕ ಅವರ ಕಾರ್ಯ ಅಭಿನಂದನಾರ್ಹ ಎಂದರಲ್ಲದೆ, ಇಲ್ಲಿನ ಪ್ರತಿಭೆಗಳು ಒಲಂಪಿಕ್ಸ್‌ನಲ್ಲಿ ಭಾಗವಹಿಸುವಂತಾಗಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿರಾಲಿ ಸೈಂಟ್ ಥಾಮಸ್ ಶಾಲೆಯ ಪ್ರಾಚಾರ್ಯ ಸ್ಯಾಮುವೆಲ್ ವರ್ಗಿಸ್, ಆರ್.ಎನ್.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಕೆ.ಮರಿಸ್ವಾಮಿ ಮಾತನಾಡಿದರು.
ಕಾರವಾರದಿಂದ ಆಗಮಿಸಿದ ಕರಾಟೆ ಮುಖ್ಯಶಿಕ್ಷಕ ಸಿ.ರಾಜನ್ ಬ್ಲಾಕ್‌ಬೆಲ್ಟ್ ವಿತರಿಸಿದರು. ಕರಾಟೆ ಶಿಕ್ಷಕ ವಾಸುದೇವ ನಾಯ್ಕ ಪ್ರಮಾಣ ಪತ್ರ ವಿತರಿಸಿದರು.ಕಿರಣ ಶ್ಯಾನಭಾಗ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಗಂಗಾಧರ ನಾಯ್ಕ ನಿರೂಪಿಸಿದರು.