×
Ad

‘ದಲಿತರಿಗೆ ರಕ್ಷಣೆ ನೀಡುವಲ್ಲಿ ಗುಜರಾತ್ ಸಿಎಂ ವಿಫಲ’

Update: 2016-07-22 22:35 IST

ಮೂಡಿಗೆರೆ, ಜು.22: ಗುಜರಾತ್‌ನಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಅಲ್ಲಿನ ಮುಖ್ಯಮಂತ್ರಿ ಯಾವುದೇ ರೀತಿಯಲ್ಲಿ ದಲಿತರಿಗೆ ರಕ್ಷಣೆ ನೀಡುತ್ತಿಲ್ಲ. ಆದ್ದರಿಂದ ಗುಜರಾತ್ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಛಲವಾದಿ ಮಹಾಸಭಾದ ಅಧ್ಯಕ್ಷ ಯು.ಆರ್.ರುದ್ರಯ್ಯ ಒತ್ತಾಯಿಸಿದ್ದಾರೆ.

   ಅವರು ಪಟ್ಟಣದ ಪತ್ರಿಕಾಭವನದಲ್ಲಿ ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉನಾದ ಮಸಡಿಯಾಣಾ ಗ್ರಾಮದಲ್ಲಿ ದಲಿತ ಯುವಕರು ಮೃತ ಜಾನುವಾರುಗಳ ಚರ್ಮ ಸುಲಿಯುತ್ತಿದ್ದ ಗುಂಪಿನ ಮೇಲೆ ಹಿಂದೂಪರ ಸಂಘಟನೆಗಳ ಗುಂಪೊಂದು ಹಲ್ಲೆ ನಡೆಸಿದ್ದಲ್ಲದೆ ರಸ್ತೆಯಲ್ಲಿಯೆ ದಲಿತ ಯುವಕರನ್ನು ಅರೆಬೆತ್ತಲೆಗೊಳಿಸಿ ಥಳಿಸಲಾಗಿದೆ. ಇದರಿಂದ ಅವಮಾನಿತರಾದ ಇಬ್ಬರು ವಿಷ ಸೇವಿಸಿ ಮೃತಪಟ್ಟಿದ್ದು, ಉಳಿದ 11 ಮಂದಿ ದಲಿತರು ಗಂಭೀರ ವ್ಯವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ಮತ್ತು ಪ್ರಧಾನಿ ನರೇದ್ರಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ಕೂಡ ದಲಿತರನ್ನು ರಕ್ಷಣೆ ಮಾಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆರ್.ರುದ್ರಯ್ಯ ದೂರಿದ್ದಾರೆ..

ಉತ್ತರ ಪ್ರದೇಶದ ಬಿಜೆಪಿ ಉಚ್ಚಾಟಿತ ರಾಜ್ಯ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಬಿಎಸ್ಪಿ ನಾಯಕಿ ಮಾಯಾವತಿ ಬಗ್ಗೆ ಅವಹೇಳನಕಾರಿಯಾದ ಮಾತು ಆಡಿರುವುದನ್ನು ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿ ನೋಡಲಾಗುತ್ತದೆ ಎಂದು ಹೇಳುವವರು ಈ ರೀತಿ ಮಹಿಳೆಯರ ಮೇಲೆ ಕೆಟ್ಟ ಮಾತುಗಳನ್ನು ಆಡಿರುವುದು ನಾಚಿಗೇಡಿನ ಸಂಗತಿ. ಹಿಂದೂ ಧರ್ಮದಲ್ಲಿ ಹೆಚ್ಚಾಗಿ ದಲಿತರೆ ಇದ್ದು, ದಲಿತರ ಮೇಲೆಯೇ ಕತ್ತಿ ಮಸೆಯುವ ಹಾಗೂ ದೌರ್ಜನ್ಯಗಳು ಮತ್ತೊಮ್ಮೆ ಮರುಕಳಿಸಿದರೆ ದೇಶದ ಎಲ್ಲಾ ದಲಿತರು ಹಿಂದೂ ಧರ್ಮವನ್ನು ತೊರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಮಹಿಳೆಯರ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲದವರು ಈ ದೇಶದಲ್ಲಿ ಇರಲು ಯೋಗ್ಯರಲ್ಲ. ಆದ್ದರಿಂದ ದಯಾಶಂಕರ್‌ನನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಎಂ.ಎಸ್.ಕೃಷ್ಣ, ಕುಮರ್ ಬಕ್ಕಿ, ಹೆಸಗಲ್ ದೇವರಾಜು, ತಿಮ್ಮಯ್ಯ, ಸಚಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News