ಮೊಬೈಲ್ ಸೀಝ್ ಮಾಡಿ ತನಿಖೆ ನಡೆಸಲು ಎಚ್.ಡಿ. ರೇವಣ್ಣ ಆಗ್ರಹ
ಹಾಸನ, ಜು.22: ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಉಪವಿಭಾಗಾಧಿಕಾರಿ ವಿಜಯ ಹಾಗೂ ಎಎಸ್ಪಿ ಶೋಭಾರಾಣಿ ಇಬ್ಬರ ಮೊಬೈಲ್‌ಗಳನ್ನೂ ಸೀಝ್ ಮಾಡಿ ತನಿಖೆ ನಡೆಸುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 20 ದಿನಗಳಿಂದ ರಾಜ್ಯದಲ್ಲಿ ಅನೇಕ ಘಟನೆಗಳು ನಡೆದಿದೆ. ಅಧಿಕಾರಿಗಳನ್ನು ಯಾರ್ಯಾರು ಬ್ಲಾಕ್‌ಮೆಲ್ ಮಾಡುತ್ತಾರೋ, ಅಂತವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಜಿಲ್ಲೆ ಒಳಗೆ ಅಧಿಕಾರಿಗಳು ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕಿರುಕುಳದಿಂದಲೇ ವಿಜಯಾರವರು ಆತ್ಮಹತ್ಯೆ ಯತ್ನ ನಡೆಸಿದ್ದಾರೆ. ನನಗೆ ಜೀವನವೇ ಬೇಕಾಗಿಲ್ಲ. ಸಾಯುತ್ತೇನೆ ಎಂದು ಉಪವಿಭಾಗಾಧಿಕಾರಿ ವಿಜಯ ಅವರು ಎಎಸ್ಪಿಗೆ ಕರೆ ಮಾಡಿ ತಿಳಿಸಿದ್ದರು. ಎದುರು ಮನೆ ಇರುವುದರಿಂದ ತಕ್ಷಣ ಆಕೆಯ ಮನೆಗೆ ಶೋಭಾರಾಣಿ ತೆರಳಿ ಮನೆಯಲ್ಲಿದ್ದವರ ಸಹಾಯದಿಂದ ಬಾಗಿಲು ಒಡೆದು ರಕ್ಷಣೆ ಮಾಡಿದರು. ಎಲ್ಲಾ ವಿಚಾರ ತಿಳಿಯಬೇಕಾದರೆ ಮೊದಲು ಇವರಿಬ್ಬರ ಮೊಬೈಲ್ ಸೀಝ್ ಮಾಡಿ ತನಿಖೆ ಮಾಡಬೇಕು. ಈಗ ಶೋಭಾರಾಣಿ ಕಾಣೆಯಾಗಿದ್ದಾರೆ. ಅವರು ಕಾಣದಿರುವುದು ನಿಗೂಢವಾಗಿದೆ. ಸತ್ಯಾಂಶ ಹೊರ ಬರಬೇಕು ಎಂದರು. ಈ ಬಗ್ಗೆ 2 ದಿನಗಳ ಹಿಂದಷ್ಟೇ ನನ್ನ ಬಳಿ ಹೇಳಿಕೊಂಡು ದುಃಖ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ ಎಂದರು.
ಆತ್ಮಹತ್ಯೆ ಪ್ರಯತ್ನ ಮಾಡಿಕೊಳ್ಳುವ ಮುನ್ನ ಪೊಲೀಸ್ ಇಲಾಖೆಗೆ ದೂರು ನೀಡಲು ತೆರಳಿದ್ದರು. ಆದರೆ, ಪೊಲೀಸ್ ಇಲಾಖೆ ದೂರು ದಾಖಲಿಸಲಿಲ್ಲ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿರುವ ಪ್ರಾಮಾಣಿಕ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ರಕ್ಷಣೆ ಕೊಡಬೇಕು. ಡಿಪಿಆರ್ ಕಾರ್ಯದರ್ಶಿಗೆ ನಾನೇ ಸಕರೆ ಮಾಡಿದ ವೇಳೆ ಎರಡು ದಿನದ ನಂತರ ಹೇಳುವೆನೆಂದು ಎಂದರು. ಜಿಲ್ಲಾ ಸಚಿವರು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದರು. ಬೇಕಾದರೆ ಕರೆ ಮಾಡಿರುವುದನ್ನು ತೆಗೆಸಲಿ ಎಂದು ಆಗ್ರಹಿಸಿದರು. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಿ, ನಂತರ ಅವರ ಮೇಲೆ ಕೇಸ್ ದಾಖಲಿಸಿ ಎಫ್‌ಐಆರ್ ಹಾಕಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ ಶಾಸಕ ಎಚ್.ಎಸ್.ಪ್ರಕಾಶ್, ಕುಮಾರಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಹಾಗೂ ಜಿಪಂ ಉಪಾಧ್ಯಕ್ಷ ಶ್ರೀನಿವಾಸ್ ಇತರರು ಇದ್ದರು.