×
Ad

ದಲಿತರ ಮೇಲಿನ ದೌರ್ಜನ್ಯವನ್ನು ಬಿಜೆಪಿ ಖಂಡಿಸಿಲ್ಲವೇಕೆ?

Update: 2016-07-23 23:54 IST

ಬೆಂಗಳೂರು, ಜು.23: ಗುಜರಾತಿನ ಉನಾ ಗ್ರಾಮದಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ, ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಖಂಡಿಸಿಲ್ಲವೇಕೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಪ್ರಶ್ನಿಸಿದ್ದಾರೆ.
ಶನಿವಾರ ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಕೆಪಿಸಿಸಿ ಹಮ್ಮಿಕೊಂಡಿದ್ದ, ಗುಜರಾತಿನ ದಲಿತರ ಮೇಲೆ ನಡೆದಿರುವ ಗಂಭೀರ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
  ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ರೂಪುಗೊಂಡ ಬಳಿಕ ದೇಶದೆಲ್ಲೆಡೆ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಅಲ್ಲದೆ, ಗುಜರಾತ್‌ನಲ್ಲಿ ಸತ್ತ ಹಸುವಿನ ಚರ್ಮ ಸುಲಿದರು ಎಂಬ ಕಾರಣಕ್ಕಾಗಿ ದಲಿತರ ಮೇಲೆ ಗಂಭೀರ ಹಲ್ಲೆ ನಡೆದಿದೆ. ಆದರೂ, ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ಮುಖಂಡರು ಈ ಬಗ್ಗೆ ಧ್ವನಿಗೂಡಿಸಿಲ್ಲ ಎಂದು ಆರೋಪಿಸಿದರು.
ದೇಶಕ್ಕೆ ಐಕ್ಯತೆ ಮುಖ್ಯವಾಗಿದೆ. ಆದರೆ, ಮೋದಿ ಸರಕಾರವು ದೇಶವನ್ನು ಛಿದ್ರೊಳಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, ಎರಡು ವರ್ಷಗಳಿಂದ ಬಿಜೆಪಿಯ ಸಂಸದರು ವಿವಾದಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದರೂ, ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೆ, ಈ ಬಗ್ಗೆ ಮೋದಿ ಎಲ್ಲೂ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಎಲ್ಲೆಡೆ ಕಡಿಮೆಯಾಗಿದೆ. ಬಿಹಾರ, ಹೊಸದಿಲ್ಲಿ ಸೇರಿ ಅನೇಕ ಕಡೆಯ ಚುನಾವಣೆಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿದೆ. ಅಲ್ಲದೆ, ಬಿಜೆಪಿ ಅಂಗ ಸಂಸ್ಥೆಯಾದ ಸಂಘ ಪರಿವಾರ ದುರ್ಬಲ ಸಮುದಾಯಗಳಿಗೆ ಅಗತ್ಯ ತೊಂದರೆ ನೀಡುತ್ತಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News