×
Ad

ಸಂಪೂರ್ಣ ತೆರಿಗೆ ಪಾವತಿದಾರರ ದೇಶವಾಗಿ ಭಾರತ: ಜೇಟ್ಲಿ

Update: 2016-07-23 23:54 IST

ಬೆಂಗಳೂರು, ಜು.23: ಭಾರತವನ್ನು ಸಂಪೂರ್ಣವಾಗಿ ತೆರಿಗೆ ಪಾವತಿದಾರರ ದೇಶವನ್ನಾಗಿ ರೂಪಿಸಲು ಕೇಂದ್ರ ಸರಕಾರವು ಆದಾಯ ಘೋಷಣೆ ಯೋಜನೆ- 2016(ಐಡಿಎಸ್)ನ್ನು ಜಾರಿಗೆ ತಂದಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಶನಿವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕರ್ನಾಟಕ ಹಾಗೂ ಗೋವಾ ವಲಯದ ಆದಾಯ ತೆರಿಗೆ ಇಲಾಖೆ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾ ಒಕ್ಕೂಟದ ಜಂಟಿ ಆಶ್ರಯದಲ್ಲಿ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಲೆಕ್ಕಪರಿಶೋಧಕರಿಗಾಗಿ ‘ಆದಾಯ ಘೋಷಣೆ ಯೋಜನೆ’ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಹಿಂದಿನ ವರ್ಷಗಲ್ಲಿ ಸಮರ್ಪಕವಾಗಿ ತಮ್ಮ ಆದಾಯ ಘೋಷಿಸಿಕೊಳ್ಳದ ಎಲ್ಲರೂ ತಾವೇ ಸ್ವಯಂಪ್ರೇರಿತವಾಗಿ ಆದಾಯ ಹಾಗೂ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಿಕೊಳ್ಳಲು ‘ಆದಾಯ ಘೋಷಣೆ ಯೋಜನೆ’ಯು ಒಂದು ಸುವರ್ಣಾವಕಾಶವಾಗಿದೆ ಎಂದು ಅರುಣ್‌ಜೇಟ್ಲಿ ಹೇಳಿದರು.
ಈ ಅವಕಾಶವನ್ನು ಪ್ರತಿಯೊಬ್ಬರೂ ಬಳಸಿಕೊಂಡು ತಮ್ಮ ಅಘೋಷಿತ ಆಸ್ತಿ ಮತ್ತು ಆದಾಯವನ್ನು ಘೋಷಿಸಿ, ಅದಕ್ಕೆ ಸಂಬಂಧಿಸಿದ ತೆರಿಗೆಯನ್ನು ಪಾವತಿಸುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಕರೆ ನೀಡಿದ ಅವರು, ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತೆರಿಗೆಯಿಂದ ಸಂಗ್ರಹವಾಗುವ ಆದಾಯವೆ ಆಧಾರವಾಗಿದೆ. ಆದುದರಿಂದ, ತೆರಿಗೆಯನ್ನು ವಂಚಿಸುವ ಕೆಲಸ ಯಾರೂ ಮಾಡಬಾರದು ಎಂದರು.
ಮಾಹಿತಿ ತಂತ್ರ್ಞಾನದ ಸಹಾಯದಿಂದ ಅಘೋಷಿತ ಆಸ್ತಿ, ತೆರಿಗೆ ವಂಚಕರನ್ನು ಪತ್ತೆ ಹಚ್ಚುವು ದು ಕಷ್ಟಕರವಲ್ಲ. ಪ್ರತಿಯೊಬ್ಬರೂ ತಮ್ಮ ಆದಾಯ ಹಾಗೂ ಆಸ್ತಿಗೆ ಸರಿಯಾದ ತೆರಿಗೆಯನ್ನು ಪಾವತಿಸುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ಕೇಂದ್ರ ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ತೆರಿಗೆಯನ್ನು ಪಾವತಿಸಿ, ನೆಮ್ಮದಿಯಿಂದ ನಿದ್ರೆ ಮಾಡಿ. ಇಲ್ಲದಿದ್ದರೆ, ಸರಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಆನಂತರ ನೀವು ನಿದ್ದೆ ಮಾಡುತ್ತೀರೋ ಇಲ್ಲವೋ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿರೋ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ ಎಂದು ಅವರು ಎಚ್ಚರಿಕೆ ನೀಡಿದರು.
ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿ ಡಾ.ಹಸ್ಮುಖ್ ಆಧ್ಯಾ ಮಾತನಾಡಿ, ಬೇನಾಮಿ ಆಸ್ತಿ ಹೊಂದಿರುವವರು ಕಾನೂನಿನ ಬಲಿಷ್ಠ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಅಧಿವೇಶನದಲ್ಲಿ ಬೇನಾಮಿ ಆಸ್ತಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಕಾಯ್ದೆಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದರು.
ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಮತ್ತು ಬೇನಾಮಿ ಆಸ್ತಿಯ ವಿವರಗಳನ್ನು ಬಹಿರಂಗಪಡಿಸದವರಿಗೆ 7ವರ್ಷ ಜೈಲು ಶಿಕ್ಷೆ ವಿಧಿಸಲು ಈ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹಸ್ಮುಖ್ ಆಧ್ಯಾ ಹೇಳಿದರು.
ದೇಶದಲ್ಲಿ ಸುಮಾರು 90 ಲಕ್ಷ ಪಾನ್‌ಕಾರ್ಡ್‌ದಾರರು ತೆರಿಗೆ ವಂಚಿಸುತ್ತಿದ್ದು, ಅವರ ದತ್ತಾಂಶ ಕೇಂದ್ರ ಸರಕಾರದ ಬಳಿ ಇದೆ. ಈ ಪಾನ್‌ಕಾರ್ಡ್‌ದಾರರಿಂದ ವಾರ್ಷಿಕ 50 ಲಕ್ಷ ಕೋಟಿ ರೂ.ಗಳ ವ್ಯವಹಾರ ನಡೆಯುತ್ತಿದೆ ಎಂದು ಅಂದಾಜಿಸಲಾಗಿದ್ದು, ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಆದಾಯ ತೆರಿಗೆ ಇಲಾಖೆ ಈ ತೆರಿಗೆ ವಂಚಕರನ್ನು ಪತ್ತೆ ಹಚ್ಚಲಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ, ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತೆ ನೂತನ್ ಒಡೆಯರ್, ಎಫ್‌ಐಸಿಸಿಐ ಸಹಅಧ್ಯಕ್ಷ ಆನಂದ್ ಸುದರ್ಶನ್, ಎಫ್‌ಕೆಸಿಸಿಐ ಅಧ್ಯಕ್ಷ ಸಿ.ದಿನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News