×
Ad

ಸಾರ್ವಜನಿಕರ ಹಿತಕ್ಕೆ ಆದ್ಯತೆ ನೀಡಿ, ಮುಷ್ಕರ ಕೈಬಿಡಿ: ಕೆಎಸ್ಸಾರ್ಟಿಸಿ ನೌಕರರಿಗೆ ಸಿಎಂ ಮನವಿ

Update: 2016-07-24 13:58 IST

ಬೆಂಗಳೂರು, ಜು.24: ಸಾರ್ವಜನಿಕರ ಹಿತಕ್ಕೆ ಆದ್ಯತೆ ನೀಡಿ, ಮುಷ್ಕರ ಕೈಬಿಡಿ..ಇದು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜುಲೈ 25 ರಿಂದ ರಾಜ್ಯಾದ್ಯಂತ ಮುಷ್ಕರ ಹೂಡಲು ಮುಂದಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಮನವಿ.

ಇಡೀ ರಾಷ್ಟ್ರದಲ್ಲಿಯೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿ ಹಾಗೂ ಗೌರವಗಳಿಗೆ ಪಾತ್ರವಾಗಿರುವ ಕರ್ನಾಟಕದಲ್ಲಿ ಉತ್ತಮ ಬಸ್ಸುಗಳು ಮಾತ್ರವಲ್ಲ, ಅತ್ಯುತ್ತಮ ಚಾಲಕರು, ನಿರ್ವಾಹಕರು, ಯಾಂತ್ರಿಕ ಹಾಗೂ ಇತರೆ ಸಿಬ್ಬಂದಿಯೂ ಇದ್ದಾರೆ ಎಂಬುದು ನನ್ನಲ್ಲಿ ಅಭಿಮಾನ ಹಾಗೂ ಹೆಮ್ಮೆಯನ್ನು ಮೂಡಿಸಿದೆ.

ರಾಜ್ಯದ ಜನತೆಯ ಜೀವನಾಡಿಯಾಗಿರುವ ಬಸ್ಸುಗಳನ್ನು ಸ್ಥಗಿತಗೊಳಿಸಿದಲ್ಲಿ ಸಾರ್ವಜನಿಕರಿಗೆ, ವಿಶೇಷವಾಗಿ ಬಸ್ಸುಗಳನ್ನೇ ಅವಲಂಭಿಸಿರುವ ಬಡವರು ಹಾಗೂ ಕಡು ಬಡವರು, ವಿದ್ಯಾರ್ಥಿಗಳು ಹಾಗೂ ಶ್ರಮಿಕ ವರ್ಗಕ್ಕೆ ಎದುರಾಗುವ ಕಷ್ಟಸಂಕಷ್ಟಗಳನ್ನು ಊಹಿಸಲು ಅಸಾಧ್ಯ. ಚಿಕಿತ್ಸೆ ಪಡೆಯಲು ಹಾಗೂ ಚಿಕಿತ್ಸೆ ಕೊಡಿಸಲು ಊರಿಂದ ಊರಿಗೆ ಪ್ರತಿ ದಿನವೂ ಆಸ್ಪತ್ರೆಗಳಿಗೆ ತೆರಳುವ ಬಡ ಜನತೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ತಾವು ನಡೆಸಲಿರುವ ಮುಷ್ಕರದಿಂದ ಅವರೆಲ್ಲರ ಮೇಲೆ ಬೀರುವ ಪರಿಣಾಮ ತಮ್ಮಲ್ಲಿ ಸಂತಸ ತರಲು ಸಾಧ್ಯವೇ ? ಒಮ್ಮೆ ಯೋಚಿಸಿ.

ಯಾವುದೇ ಸಂಸ್ಥೆ ಲಾಭದ ಹಾದಿಯಲ್ಲಿದ್ದಾಗ ಮಾತ್ರ ಆ ಸಂಸ್ಥೆಯ ನೌಕರರ ಬದುಕು ಸುಭದ್ರ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಶೇ.10 ರಷ್ಟು ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ತಮ್ಮ ಇತರೆ ಬೇಡಿಕೆಗಳನ್ನೂ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂಬ ಭರವಸೆ ನೀಡುತ್ತಿದ್ದೇನೆ.

ನಮ್ಮ ಸರಕಾರ ತಮ್ಮ ಬೇಡಿಕೆಗಳಿಗೆ ಹಂತಹಂತವಾಗಿ ಸ್ಪಂದಿಸುತ್ತದೆ. ತಾವು ನನ್ನ ಕರೆಗೆ ಓಗೊಟ್ಟು, ಮುಷ್ಕರವನ್ನು ಹಿಂಪಡೆಯುವಿರಿ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News