×
Ad

ದಲಿತರ ಮೇಲೆ ದಾಳಿ: ಇಬ್ಬರು ಬಜರಂಗಿಗಳ ಸಹಿತ ಏಳು ಮಂದಿಯ ಬಂಧನ

Update: 2016-07-24 20:55 IST

ಚಿಕ್ಕಮಗಳೂರು, ಜು.24: ದಲಿತ ಕುಟುಂಬವೊಂದು ಹಸುವನ್ನು ಕೊಂದಿದೆ ಎಂಬ ಆರೋಪದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ ಸಂಬಂಧ ಬಜರಂಗದಳದ ಇಬ್ಬರು ಕಾರ್ಯಕರ್ತರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂದಿಸಿದ್ದಾರೆ.

ಗುಜರಾತ್‌ನ ಉನಾದಲ್ಲಿ ಹಸುಗಳ ಚರ್ಮ ಸುಲಿಯುತ್ತಿದ್ದ ಆರೋಪದಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ, ಈ ಘಟನೆಯೂ ಬೆಳಕಿಗೆ ಬಂದಿದೆ.

ಮೂವರು ದಲಿತರು ನೀಡಿದ ಪ್ರತಿದೂರಿನ ಮೇಲೆ ಪೊಲೀಸರು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯಪುರ ಪೊಲೀಸ ಠಾಣೆ ವ್ಯಾಪ್ತಿಯ ತಮ್ಮ ಮನೆಯನ್ನು ಹಸುವನ್ನು ಕಡಿದಿದ್ದಾರೆ ಎಂಬ ಆರೋಪದ ಮೇಲೆ ದಲಿತ ಕುಟುಂಬದ ವಿರುದ್ಧ ಜುಲೈ 10ರಂದು ಪ್ರಕರಣ ದಾಖಲಿಸಲಾಗಿತ್ತು. ಈ ವಿಷಯವನ್ನು ಕೋಮು ಸೌಹಾರ್ದ ವೇದಿಕೆ ಎತ್ತಿದ ಹಿನ್ನೆಲೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ.

ದಲಿತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಬಜರಂಗಿಗಳು ಸೇರಿದಂತೆ ಏಳು ಮಂದಿ ಸ್ಥಳೀಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಯಪುರ ಪಿಎಸ್‌ಐ ಚಂದ್ರಶೇಖರ ವಿವರಿಸಿದ್ದಾರೆ. ಆರೋಪಿಗಳು ದಲಿತರ ಮನೆಗಳಿಗೆ ಹೋಗಿ, ಅನುಮತಿ ಇಲ್ಲದೇ ಅಲ್ಲಿ ದನ ಕಡಿದಿರುವುದು ನಿಜವೇ ಎಂದು ಪರಿಶೀಲಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ಮಾಂಸ ಕಡಿಯುತ್ತಿದ್ದುದು ಪತ್ತೆಯಾದ ಹಿನ್ನೆಲೆಯಲ್ಲಿ ಮೂವರು ದಲಿತರನ್ನು ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಗಿತ್ತು.

ಆ ಬಳಿಕ ದೊಂಬಿ ಎಬ್ಬಿಸಿದ ಮತ್ತು ದಲಿತರ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಏಳೂ ಮಂದಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಎರಡೂ ದೂರುಗಳ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News