×
Ad

ಸಾರಿಗೆ ನೌಕರರ ಮುಷ್ಕರ; ಖಾಸಗಿ ವಾಹನಗಳಿಂದ ದುಪ್ಪಟ್ಟು ದರ ವಸೂಲಿ, ಅಲ್ಲಲ್ಲಿ ಸರಕಾರಿ ಬಸ್‌ಗಳಿಗೆ ಕಲ್ಲು ತೂರಾಟ

Update: 2016-07-25 10:12 IST

ಬೆಂಗಳೂರು, ಜು.25: ವೇತನ ಹೆಚ್ಚಳಕ್ಕೆ  ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ  ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಇಂದು ಆರಂಭಗೊಂಡಿದ್ದು, ಈ ನಡುವೆ ಸಂಚರಿಸಿದ  ಕೆಲವು ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.. 
ಬೆಂಗಳೂರು ನಗರದಲ್ಲಿ ಸಂಚರಿಸುತ್ತಿದ್ದ  ವೊಲ್ವೊ, ರಾಜಹಂಸ ಸೇರಿದಂತೆ ಹಲವು ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ಎಸೆದು ಹಾನಿ ಮಾಡಿರುವ  ಘಟನೆ ನಡೆದಿದೆ.  ಬೆಂಗಳೂರಿನ ಕೆ.ಜಿ.ರಸ್ತೆ, ಯಶವಂತಪುರ, ಮೈಸೂರು ಬ್ಯಾಂಕ್ ವೃತ್ತ, ತುಮಕೂರು ರಸ್ತೆಯ ಜಿಂದಾಲ್ ಬಳಿ , ಯಾದಗಿರಿ, ನಾರಾಯಣಪುರ, ವಿಜಯಪುರಗಳಲ್ಲಿ ಸಂಚಾರ ನಡೆಸಿದ ಬಸ್‌ಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆಂದು ತಿಳಿದು ಬಂದಿದೆ.  ಕೆಲವು ಬಸ್ ಗಳ ಚಕ್ರಗಳ ಗಾಳಿ ತೆಗೆದು ಸಂಚರಿಸದಂತೆ ತಡೆಯೊಡ್ಡಿದ್ದಾರೆ.
ಬೆಂಗಳೂರಿನಲ್ಲಿ ಬಿಟಿಎಂಸಿ ಬಸ್ ಗಳಿಲ್ಲದೆ ಜನರು ತೊಂದರೆ ಅನುಭವಿಸಿದ್ದಾರೆ.
ಸರಕಾರ ಬಸ್ ಗಳ ಮುಷ್ಕರದ ಲಾಭ ಪಡೆದಿರುವ ಖಾಸಗಿ ವಾಹನಗಳು ಕೆಲವು ಕಡೆಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಿನ್ನೆಲೆಯಲ್ಲಿ ಖಾಸಗಿ ಬಸ್ಸು, ವ್ಯಾನುಗಳು, ಆಟೋ ರಿಕ್ಷಾಗಳಿಗೆ ಎಲ್ಲಿಲ್ಲದ ಬೇಡಿಕೆ.. .
ಬೆಂಗಳೂರು ನಗರ, ಗ್ರಾಮಾಂತರ, ಧಾರವಾಡ, ಬಳ್ಳಾರಿ, ಬೀದರ್, ಕಲಬುರಗಿ ,ಚಿತ್ರದುರ್ಗ, ಮಂಡ್ಯ, ರಾಮನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಹಾವೇರಿ, ಉತ್ತರ ಕನ್ನಡ, ಚಿಕ್ಕಮಗಳೂರು, ಯಾದಗಿರಿಗಳಲ್ಲಿ ಜಿಲ್ಲೆಗಳಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.  . ಹಾಸನ, ದಕ್ಷಿಣ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿತ್ತು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News