×
Ad

ಬಸ್ ಮುಷ್ಕರ: ಸಂಕಷ್ಟದಲ್ಲಿ ಜನಜೀವನ

Update: 2016-07-25 19:36 IST

ಬೆಂಗಳೂರು, ಜು. 25: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರ್ವಜನಿಕ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು.

ರೋಗಿಗಳು, ಗರ್ಭಿಣಿಯರು, ವೃದ್ಧರು ಸೇರಿದಂತೆ ಸಾರ್ವಜನಿಕ ಪ್ರಯಾಣಿಕರು ಅಕ್ಷರಶಃ ಪರದಾಡ ಬೇಕಾಯಿತು. ಅಲ್ಲದೆ, ಸರಕಾರಿ ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ನಿನ್ನೆ (ಜು.24)ಸಂಜೆಯಿಂದಲೇ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಚಾಲಕರು ಮತ್ತು ನಿರ್ವಾಹಕರು ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ 1.25 ಲಕ್ಷ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಸುಮಾರು 23ಸಾವಿರಕ್ಕೂ ಅಧಿಕ ಬಸ್ಸುಗಳು ಆಯಾ ಡಿಪೋಗಳಲ್ಲಿ ನಿಂತಿದ್ದವು. ಹೀಗಾಗಿ ಪ್ರತಿನಿತ್ಯದ ಸಂಚಾರಕ್ಕೆ ಸರಕಾರಿ ಬಸ್‌ಗಳನ್ನು ಆಶ್ರಯಿಸಿದ್ದ 1ಕೋಟಿಗೂ ಅಧಿಕ ಮಂದಿಯ ಕಾರ್ಯ ಚಟುವಟಿಕೆಗೆ ಬ್ರೇಕ್ ಬಿದ್ದಂತೆ ಆಯಿತು.

ಹೊರ ರಾಜ್ಯ, ಹೊರ ಜಿಲ್ಲೆ-ತಾಲೂಕು ಕೇಂದ್ರಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ-ತಾಲೂಕುಗಳಿಂದ ವಿವಿಧ ಸ್ಥಳಗಳಿಗೆ ತೆರಳಬೇಕಿದ್ದ ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿ ನಿದ್ದೆಗೆ ಶರಣಾಗಬೇಕಾಯಿತು. ಬೆರಳೆಣಿಕೆಯಷ್ಟಿರುವ ಖಾಸಗಿ ಬಸ್‌ಗಳು, ಕಾರು, ರಿಕ್ಷಾಗಳನ್ನು ಆಶ್ರಯಿಸಿದರು.

ದುಪ್ಪಟ್ಟು ವಸೂಲಿ: ಸಾರಿಗೆ ನೌಕರರ ಮುಷ್ಕರದ ಲಾಭವನ್ನು ಪಡೆದುಕೊಳ್ಳಲು ಖಾಸಗಿ ಬಸ್ ಮಾಲಕರು, ಕಾರು ಹಾಗೂ ರಿಕ್ಷಾ ಚಾಲಕರು ಹಿಂಜರಿಕೆ ತೋರಲಿಲ್ಲ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರಯಾಣಿಕರಿಂದ ಮೂರ್ನಾಲ್ಕು ಪಟ್ಟು ಹೆಚ್ಚಿನ ಹಣ ವಸೂಲಿ ಆರೋಪಗಳು ಕೇಳಿಬಂದಿವೆ.

ಮುಷ್ಕರ ಕೈಬಿಡಲು ಮನವಿ: ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿಯನ್ನು ಮಾಡಿದ್ದಾರೆ.

 ಆದರೆ, ಮುಷ್ಕರನಿತರ ನೌಕರರು ಶೇ.35ರಷ್ಟು ವೇತನ ಹೆಚ್ಚಳ ಮಾಡುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯ ಸರಕಾರ ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡಿರೂ ಆ ಬಗ್ಗೆ ತಮಗೇನು ಚಿಂತೆಯಿಲ್ಲ ಎಂದು ರಾಜ್ಯ ಸರಕಾರಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಹೀಗಾಗಿ ರಾಜ್ಯ ಸರಕಾರ ಹಾಗೂ ಸಾರಿಗೆ ನೌಕರರ ಮುಷ್ಕರ ಮಧ್ಯೆ ಪ್ರಯಾಣಿಕರು ಅನಿವಾರ್ಯವಾಗಿ ಸಂಕಷ್ಟಕ್ಕೆ ಸಿಲುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ರಾಜ್ಯ ಸರಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸದಾ ಜನ ಜಂಗುಳಿಯಿಂದ ತುಂಬಿ ತುಳುತ್ತಿದ್ದ ಇಲ್ಲಿನ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಶಾಂತಿನಗರ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ಜಯನಗರ, ಬನಶಂಕರಿ ಸೇರಿ ರಾಜ್ಯದ ಬಹುತೇಕ ಬಸ್ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅಲ್ಲಲ್ಲಿ ಕಲ್ಲು ತೂರಾಟ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕೆಲ ಕಿಡಿಗೇಡಿಗಳು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಸರಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಬಸ್ಸಿನ ಗಾಜುಗಳನ್ನು ಪುಡಿಗೈದಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಷ್ಟೇನು ತೊಂದರೆ ಆಗಲಿಲ್ಲ.

ಆಗದ ಪರ್ಯಾಯ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದೆಂಬ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ, ವಾಸ್ತವದಲ್ಲಿ ಹಾಸ್ಯಾಸ್ಪದಕ್ಕೆ ಈಡಾಗಿದೆ. ಬೆಂಗಳೂರು ಸೇರಿ ರಾಜ್ಯದ ಯಾವುದೇ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಸರಕಾರ ಸೋತಿದೆ.

ಮುಷ್ಕರ ಯಶಸ್ವಿ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಷ್ಕರದ ಬಿಸಿ ಸಾಮಾನ್ಯ ಜನರಿಗೆ ತೀವ್ರವಾಗಿ ತಟ್ಟಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರ ಕೆಲ ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.

ಸಾರಿಗೆ ನೌಕರರ ವೇತನ ಹೆಚ್ಚಳ ಬೇಡಿಕೆಗೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ನಾಳೆ (ಜು.26)ಯೂ ಮುಷ್ಕರ ಮುಂದುವರಿಯಲಿದ್ದು, ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಇದರಿಂದಾಗಿ ಕೂಲಿ ಕಾರ್ಮಿಕರು ಸೇರಿದಂತೆ ಜನ ಜೀವನ ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಲಿದೆ.

ಮುಷ್ಕರ ಕೈಬಿಟ್ಟರೆ ಚರ್ಚೆಗೆ ಸಿದ್ಧ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಜು. 25: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆ ಈಡೇರಿಸುವ ಸಂಬಂಧ ಚರ್ಚೆಗೆ ರಾಜ್ಯ ಸರಕಾರ ಸಿದ್ದವಿದೆ. ಆದರೆ, ನೌಕರರು ತಾವು ಕೈಗೊಂಡಿರುವ ಮುಷ್ಕರವನ್ನು ಮೊದಲು ಕೈಬಿಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮುಷ್ಕರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರದ ಮುಂದೆ ವೇತನ ಹೆಚ್ಚಳದ ಪ್ರಸ್ತಾವನೆ ಇಲ್ಲ. ಸಾರಿಗೆ ಸಂಸ್ಥೆಯ ನೌಕರರಿಗೆ ಈಗಾಗಲೇ ವಹಿವಾಟಿನ ಶೇ.50ರಷ್ಟು ಸಂಬಳ ನೀಡುತ್ತಿದ್ದೇವೆ. ಹೀಗಾಗಿ ಮೊದಲು ಮುಷ್ಕರ ಹಿಂಪಡೆದು ಮಾತುಕತೆ ಬಂದರೆ ನೌಕರರ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದರು.

ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ನೌಕರರು ಮುಷ್ಕರ ಕೈಬಿಡಬೇಕು. ಆ ಬಳಿಕ ಮಾತುಕತೆ ನಡೆಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದ ಅವರು, ಮುಷ್ಕರನಿರತ ನೌಕರರ ವಿರುದ್ಧ ‘ಎಸ್ಮಾ’ ಜಾರಿಗೊಳಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಪರ್ಯಾಯ ವ್ಯವಸ್ಥೆ: ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂಧ ಅವರು, ವ್ಯವಸ್ಥಾಪಕ ನಿರ್ದೇಶಕರಿಗೆ ಇರುವ ವಿಶೇಷ ಅಧಿಕಾರವನ್ನು ಬಳಸಿ ಕೊಂಡು ನೆರೆ ರಾಜ್ಯಗಳಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಈ ಸಂಬಂಧ ಈಗಾಗಲೇ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ ಸಾರಿಗೆ ಸಂಸ್ಥೆಗಳ ಜತೆ ಪರಸ್ಪರ ಸಹಕಾರದ ಆಧಾರದ ಮೇಲೆ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸಾರಿಗೆ ನೌಕರರು ಕೂಡಲೇ ತಮ್ಮ ಮುಷ್ಕರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

142 ಬಸ್ಸುಗಳು ಜಖಂ; 14.69 ಲಕ್ಷ ರೂ.ನಷ್ಟ

ಬೆಂಗಳೂರು, ಜು.25: ರಾಜ್ಯದ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ 142 ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದು, ಇದರಿಂದಾಗಿ ಸರಕಾರಕ್ಕೆ 14.69 ಲಕ್ಷ ರೂ.ನಷ್ಟವುಂಟಾಗಿರುವುದಾಗಿ ಅಂದಾಜಿಸಲಾಗಿದೆ.

 ಕೆಎಸ್ಸಾರ್ಟಿಸಿಯ 82 ಬಸ್ಸುಗಳಿಗೆ ಆಗಿರುವ ಹಾನಿಯಿಂದಾಗಿ 8.51 ಲಕ್ಷ ರೂ., ಬಿಎಂಟಿಸಿಯ ನಾಲ್ಕು ಬಸ್ಸುಗಳು ಜಖಂಗೊಂಡಿದ್ದು, ಇದರಿಂದಾಗಿ 27 ಸಾವಿರ ರೂ.ನಷ್ಟವುಂಟಾಗಿದೆ. ಎನ್‌ಡಬ್ಲುಕೆಆರ್‌ಟಿಸಿಯ 17 ಬಸ್ಸುಗಳಿಗೆ ಹಾನಿಯಾಗಿದ್ದು, 2.07 ಲಕ್ಷ ರೂ.ನಷ್ಟವುಂಟಾಗಿದೆ. ಎನ್‌ಇಕೆಆರ್‌ಟಿಸಿಯ 39 ಬಸ್ಸುಗಳಿಗೆ ಆಗಿರುವ ಹಾನಿಯಿಂದ ಸರಕಾರಕ್ಕೆ 3.84 ಲಕ್ಷ ರೂ.ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಹೌಸ್ ಫುಲ್ ಮೆಟ್ರೋ : 20 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣ

 ಬೆಂಗಳೂರು, ಜು.25: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಬಿಎಂಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಜನಜಂಗುಳಿ ಕಂಡುಬಂತು.

 ಮೆಟ್ರೋದಲ್ಲಿ ಪ್ರತಿದಿನ ಸರಾಸರಿ120 ಟ್ರಿಪ್‌ಗಳಲ್ಲಿ 13 ಸಾವಿರ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಇಂದು ಸಾರಿಗೆ ಮುಷ್ಕರದಿಂದಾಗಿ 150 ಟ್ರಿಪ್‌ಗಳಿಗೆ ಹೆಚ್ಚಿಸಲಾಗಿ 20 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಿರುವುದು ದಾಖಲೆಯಾಗಿದೆ. ದಿನದಿಂದ ದಿನಕ್ಕೆ ಮೆಟ್ರೋ ಜನಜನಿತವಾಗುತ್ತಿದ್ದು, ಇದರಲ್ಲಿ ಪ್ರಯಾಣಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಅತಿ ವೇಗ ಸುಗಮ ಸಂಚಾರದಿಂದಾಗಿ ಕೆಲವೇ ನಿಮಿಷಗಳಲ್ಲಿ ನಿಗದಿತ ಸ್ಥಳ ತಲುಪಬಹುದಾಗಿರುವುದರಿಂದ ಇದರ ಬಳಕೆಗೆ ಜನ ಮುಂದಾಗಿದ್ದಾರೆ.

ಪ್ರತಿ 6 ನಿಮಿಷ್ಕಕೊಮ್ಮೆ ಮೆಟ್ರೊ ಟ್ರೈನ್ ಓಡಿಸಲಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿ 5 ನಿಮಿಷ್ಕಕೊಮ್ಮೆ ಟ್ರೈನ್ ಓಡಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್ಸಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲ ತಿಳಿಸಿದ್ದಾರೆ.

 ಇಂದು ನಗರ ಜನತೆಗೆ ಮೆಟ್ರೊ ರೈಲಿನ ಅವಶ್ಯಕತೆ ಹೆಚ್ಚಾಗಿ ಕಂಡುಬಂತು. ಸಾಕಷ್ಟು ಮಂದಿ ಕಚೇರಿ ತಲುಪಲು ಈ ವ್ಯವಸ್ಥೆ ಬಳಸಿಕೊಂಡಿದ್ದರಿಂದ ಮೆಟ್ರೊ ಸಿಬ್ಬಂದಿಯನ್ನು ಹೆಚ್ಚಳ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News