ಭಟ್ಕಳ: ಕಾರು ಢಿಕ್ಕಿಯಾಗಿ ಎರಡು ಕುದುರೆಗಳು ಸ್ಥಳದಲ್ಲೇ ಸಾವು
Update: 2016-07-26 21:21 IST
ಭಟ್ಕಳ, ಜು.26: ಹೊನ್ನಾವರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮಾರುತಿ ಕಾರೊಂದು ರಸ್ತೆಯನ್ನು ದಾಟುತ್ತಿದ್ದ ಎರಡು ಕುದುರೆಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಕುದುರೆಗಳು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ತಾಲೂಕಿನ ವೆಂಕಟಾಪುರದ ಜಾಗಟೇಬೈಲ್ ಬಳಿಯ ರಾ. ಹೆ. 66ರಲ್ಲಿ ಸಂಭವಿಸಿದೆ.
ರಾತ್ರಿವೇಳೆ ಕುದುರೆಗಳು ರಸ್ತೆ ದಾಟುವ ಸಂದರ್ಭದಲ್ಲಿ ವೇಗವಾಗಿ ಕಾರು ಬಂದಿದ್ದರಿಂದ ನೇರವಾಗಿ ಕುದುರೆಗಳಿಗೆ ಢಿಕ್ಕಿಯಾಯಿತೆನ್ನಲಾಗಿದೆ. ಪರಿಣಾಮ ಎರಡೂ ಕುದುರೆಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕಾರು ಉಡುಪಿಯ ರವಿ ಅಡಿಗ ಎನ್ನುವವರಿಗೆ ಸೇರಿದೆ ಎನ್ನಲಾಗಿದ್ದು ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.