ಮುದ್ದೇಬಿಹಾಳ: ಪುರಸಭೆ ವಿರೋಧ ಪಕ್ಷದ ಸದಸ್ಯರ ಧರಣಿ 4 ನೇ ದಿನಕ್ಕೆ

Update: 2016-07-27 16:06 GMT

ಮುದ್ದೇಬಿಹಾಳ,ಜು.27:11 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಪುರಸಭೆಯ ವಿರೋಧ ಪಕ್ಷದ ಸದಸ್ಯರು ಸೋಮವಾರದಿಂದ ಪ್ರಾರಂಭಿಸಿರುವ ಧರಣಿ ಸತ್ಯಾಗ್ರಹ ಬುಧವಾರ 3 ದಿನ ಪೂರೈಸಿದ್ದು ಗುರುವಾರ 4 ನೇ ದಿನಕ್ಕೆ ಕಾಲಿರಿಸಿದೆ.

          ಕಾನೂನುಬಾಹಿರವಾಗಿ ಮಾಡಿರುವ ಠರಾವು ರದ್ದುಪಡಿಸಿ ತನಿಖೆ ನಡೆಸಬೇಕು. ಸರ್ವ ಸದಸ್ಯರ ಗಮನಕ್ಕೆ ತರದೆ ತಿದ್ದುಪಡಿ ಮಾಡಿರುವ ಕ್ರಿಯಾಯೋಜನೆಗಳನ್ನು ರದ್ದುಪಡಿಸಬೇಕು. ಪುರಸಭೆಯಲ್ಲಿ ಸದಸ್ಯರು, ಸಾರ್ವಜನಿಕರೊಂದಿಗೆ ಅಸಹಕಾರದಿಂದ ನಡೆದುಕೊಳ್ಳುತ್ತಿರುವ ಕಂಪ್ಯೂಟರ್ ಆಪರೇಟರ್ ಆನಂದ ಮಾಳಜಿ ಮೇಲೆ ಕ್ರಮ ಜರುಗಿಸಬೇಕು. ಪುರಸಭೆ ಕಾಮಗಾರಿ ಪರಿಶೀಲಿಸಿ ಗುಣಮಟ್ಟ ಖಾತರಿಪಡಿಸಿಕೊಳ್ಳದೆ ಮಂಜೂರಾತಿ, ಅನುಮೋದನೆ ನೀಡುತ್ತಿರುವ ವಿಜಯಪುರ ನಗರಾಭಿವೃದ್ದಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಮಹಾದೇವ ಮುರಗಿ ಮತ್ತು ಎಇಇ ಮಹೇಶ ಕಲಾಲ ಮೇಲೆ ಕ್ರಮ ಜರಿಗಿಸಬೇಕು ಮುಂತಾದವುಗಳು ಬೇಡಿಕೆಯಲ್ಲಿ ಸೇರಿವೆ.

          ಮಂಗಳವಾರ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಬೇಡಿಕೆಗಳ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದರೂ ಸಂಧಾನ ಪ್ರಯತ್ನ ವಿಫಲಗೊಂಡು ಧರಣಿ ಮುಂದುವರೆದಿತ್ತು.

          ಬುಧವಾರ 3 ನೇ ದಿನಕ್ಕೆ ಕಾಲಿಟ್ಟ ಧರಣಿಗೆ ಹಲವು ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು.ಈ ಮಧ್ಯ ಜಿಲ್ಲಾಧಿಕಾರಿಯೇ ಧರಣಿ ಸ್ಥಳಕ್ಕೆ ಬಂದು ಬೇಡಿಕೆ ಆಲಿಸಿ, ಈಡೇರಿಸುವ ಭರವಸೆ ನೀಡುವವರೆಗೂ ಧರಣಿ ಸತ್ಯಾಗ್ರಹ ಅನಿರ್ಧಿಷ್ಠಾವಧಿಯವರೆಗೆ ಮುಂದುವರೆಸಲಾಗುತ್ತದೆ ಎಂದು ಧರಣಿ ನಿರತರ ಮುಖಂಡ ಮಹಿಬೂಬ ಗೊಳಸಂಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News