ದಲಿತ ಪದದ ದುರ್ಬಳಕೆ ಬೇಡ : ಅಣ್ಣಯ್ಯ
ಕುಶಾಲನಗರ, ಜು. 27: ದಲಿತ ಎಂಬ ಪದವನ್ನು ದುರ್ಬಳಕೆ ಮಾಡಿಕೊಂಡು ಸವರ್ಣೀಯರ ಮೇಲೆ ಅಧಿಕಾರವನ್ನು ಮಾಡುವ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಸಂಘಟನೆಗಳು ಬೇರೆಯವರ ಮೇಲೆ ದಬ್ಬಾಳಿಕೆ ಮಾಡಲು ಇರುವುದೆಂಬ ತಪ್ಪುಕಲ್ಪನೆ ಮೂಡಿಸದೆ, ದಲಿತರಿಗೆ ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ತಲುಪಿಸುವಂತೆ ಮಾಡಿ ಎಂದು ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿಯ ಗೌರವ ಸಲಹೆಗಾರ ಅಣ್ಣಯ್ಯ ಸಲಹೆ ನೀಡಿದರು.
ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದು, ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡ್‌ಗೋಟ್ಟದ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಿತಿಯ ಅಧ್ಯಕ್ಷರಾಗಿ ಕೂಡಿಗೆ ಗ್ರಾಪಂ ಹಾಲಿ ಸದಸ್ಯ ಕೆ.ಟಿ ಈರಯ್ಯ, ಉಪಾಧ್ಯಕ್ಷರಾಗಿ ಎಂ.ಬಿ ಗಣೇಶ್ ಅಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದರಾಜ್ ಎಚ್.ಇ, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ, ಅರ್ಜುನ್‌ಕುಮಾರ್, ರಮೇಶ್ ಭುವನಗಿರಿ ಆಯ್ಕೆಯಾದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎ.ಸಿ.ಸಿ ಗ್ರೂಪ್‌ನ ಅಭಿಲಾಷ್ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಕೆ.ಟಿ ಈರಯ್ಯ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್‌ರವರು ದಲಿತರ ಏಳಿಗೆಗಾಗಿ ತಂದಿರುವ ಕಾನೂನುಗಳನ್ನು ಪದೇ ಪದೇ ತಿದ್ದುಪಡಿ ಮಾಡಿ, ಕೆಲವು ಸರಕಾರದ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಪಿತೂರಿ ನಡೆಯುತ್ತಿದೆ. ಅದರ ವಿರುದ್ಧದ ನಮ್ಮ ಹೋರಾಟದ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಮುಂದೆ ಬರುವಂತೆ ಮಾಡಬೇಕೆಂದರು.
ಪದಗ್ರಹಣ ಸಮಾರಂಭದಲ್ಲಿ ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿಯ ಸದಸ್ಯರು ಮತ್ತು ಗ್ರಾಮದ ನಿವಾಸಿಗಳು ಪಾಲ್ಗೊಂಡಿದ್ದರು.