ತಾಲೂಕು ಕಚೇರಿಗೆ ಅಲೆಯುವ ಅಗತ್ಯವಿಲ್ಲ
ತೀರ್ಥಹಳ್ಳಿ,ಜು.27: ರಾಜ್ಯ ಸರಕಾರವು ಹಲವು ಯಶಸ್ವಿ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಈ ದಿಕ್ಕಿನಲ್ಲಿ ಗ್ರಾಮರಾಜ್ಯಗಳ ಕನಸನ್ನು ರಾಜ್ಯ ಸರಕಾರ ಸಕಾರಗೊಳಿಸುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಅರ್ಜಿಗಳಿಗಾಗಿ ತಾಲೂಕು ಕಚೇರಿಗೆ ಅಲೆಯುವ ಆವಶ್ಯಕತೆಯಿಲ್ಲ. ಬಾಪೂಜಿ ಕೇಂದ್ರವೇ ಸಹಾಯವಾಣಿಯಾಗಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಪಟ್ಟಣದ ಮೇಲಿನಕುರುವಳ್ಳಿ ಗ್ರಾಪಂನಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ 7 ಸಾವಿರ ಗ್ರಾಪಂಗಳ ಪೈಕಿ 2 ಸಾವಿರ ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಆರಂಭವಾಗಿದೆ. ತಾಲೂಕಿನ 13 ಕೇಂದ್ರಗಳಲ್ಲಿ ಸೇವಾಕೇಂದ್ರ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವಾ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಗುವುದು ಎಂದರು.
ಈ ಯೋಜನೆಯಿಂದ ಮಾನವ ಸಂಪನ್ಮೂಲ ಕ್ರೋಢೀಕರಣವಾಗುವುದು ಹಾಗೂ ಬಡ ಜನರ ದುಡಿಮೆಯ ದುಡ್ಡು ಅನಾವಶ್ಯಕವಾಗಿ ಖರ್ಚಾಗುವುದು ಉಳಿಯುತ್ತದೆ. ಸರಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗೂ ಕೆಲವು ವಿಚಾರಗಳನ್ನು ಈ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಲೋಕೇಶ್ವರಪ್ಪ, ತಾಪಂ ಅಧಿಕಾರಿ ಲಕ್ಷ್ಮಣ್, ಜಿಪಂ ಸದಸ್ಯೆ ಕಲ್ಪನಾ ಪದ್ಮನಾಭ್, ತಾಪಂ ಸದಸ್ಯ ಕೆಳಕೆರೆ ದಿವಾಕರ್, ಶ್ರುತಿ ವೆಂಕಟೇಶ್, ಗ್ರಾಪಂ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷ ಕುರುವಳ್ಳಿ ಅನಿಲ್, ಗ್ರಾಪಂ ಸದಸ್ಯರು ಹಾಗೂ ಪಿಡಿಒ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.