×
Ad

ಬಜರಂಗದಳ ನಿಷೇಧಕ್ಕೆ ಆಗ್ರಹ

Update: 2016-07-27 22:41 IST

ಶಿವಮೊಗ್ಗ, ಜು. 27: ದೇಶದ ವಿವಿಧೆಡೆ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿಯವರ ವಿರುದ್ಧ ಬಿಜೆಪಿ ಪಕ್ಷದ ಮುಖಂಡ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಹಲವು ದಶಕಗಳು ಕಳೆದರೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದಲಿತ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದು ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಕಹಿ ಅಹಿತಕರ ಘಟನೆಗಳೇ ಸಾಕ್ಷಿಯಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ದಲಿತ ಯುವಕರ ಮೇಲೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಅಮಾನುಷ ಹಲ್ಲೆ ನಡೆಸಿದ್ದಾರೆ. ಮೃಗೀಯ ವರ್ತನೆ ತೋರಿಸಿದ್ದಾರೆ. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತರ ಮನೆಯೊಂದಕ್ಕೆ ನುಗ್ಗಿ ಬಜರಂಗದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಹಾವೇರಿ ಜಿಲ್ಲೆ ಇಟ್ಟಿಗಿ ಗ್ರಾಮದಲ್ಲಿ 75 ದಲಿತ ಕುಟುಂಗಳಿಗೆ ಮೇಲ್ವರ್ಗದವರು ಬಹಿಷ್ಕಾರ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ತಕ್ಷಣವೇ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಯಾಶಂಕರ್‌ರವರನ್ನು ಗಡಿಪಾರು ಮಾಡಬೇಕು. ಗುಜರಾತ್ ಹಾಗೂ ಚಿಕ್ಕಮಗಳೂರಿನಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಬಜರಂಗದಳ ಸಂಘಟನೆಯ ಸದಸ್ಯರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಬಜರಂಗದಳ ಸಂಘಟನೆ ನಿಷೇಧಿಸಬೇಕು. ಹಾವೇರಿ ಜಿಲ್ಲೆಯ ಇಟ್ಟಿಗಿ ಗ್ರಾಮದಲ್ಲಿ ದಲಿತರ ಮೇಲೆ ಬಹಿಷ್ಕಾರ ಹಾಕಿದವರ ಮೇಲೆ ದೂರು ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆೆಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಭದ್ರಾವತಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೆ.ಎ.ರಾಜ್‌ಕುಮಾರ್, ಎಂ.ರಂಗಪ್ಪ, ಪ್ರಕಾಶ್ ಲಿಗಾಡಿ, ಗುರುರಾಜ್, ಮುರುಳೀಧರ, ನರಸಿಂಹಮೂರ್ತಿ, ಬಸವರಾಜ, ಈಶ್ವರಪ್ಪ, ಅಂಗವಿಕಲರ ವಿಭಾಗದ ಕಾಣಿಕ್ಯರಾಜ್, ಮಹಿಳಾ ಒಕ್ಕೂಟದ ಮಹೇಶ್ವರಿ, ಮಾಲ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News