×
Ad

ಮಾಯಾವತಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ

Update: 2016-07-27 22:43 IST

ಶಿವಮೊಗ್ಗ, ಜು. 27: ದಲಿತರ ಮೇಲೆ ದೌರ್ಜನ್ಯ ಮತ್ತು ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಬಗ್ಗೆ ಉತ್ತರ ಪ್ರದೇಶದ ಬಿಜೆಪಿ ಮುಖಂಡ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ, ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಾಯಾವತಿಯವರು 4 ಬಾರಿ ಮುಖ್ಯಮಂತ್ರಿ ಯಾಗಿದ್ದವರು. ಬಿಎಸ್ಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಇಂಥವರ ಬಗ್ಗೆ ಬಿಜೆಪಿಯ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಎಂಬವರು ವೇಶ್ಯೆ ಎಂಬ ಪದವನ್ನು ಬಳಸುವುದರ ಮೂಲಕ ಅವಹೇಳನ ಮಾಡಿದ್ದಾರೆ. ಇದು ಕೇವಲ ಮಾಯಾವತಿಯವರಿಗೆ ಮಾಡಿರುವ ಅವಮಾನವಲ್ಲ, ದೇಶದ ಸ್ತ್ರೀ ಸಮೂಹಕ್ಕೆ ಮಾಡಿದ ಅವಮಾನವಾಗಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರು ಮಾತೆತ್ತಿದರೆ ನಮ್ಮದು ಸಂಸ್ಕೃತಿಯ ಹಿನ್ನೆಲೆ, ಮಹಿಳೆಯರ ಬಗ್ಗೆ ಗೌರವವಿರುವ ಪಕ್ಷ ಎಂದು ಹೇಳುತ್ತಾರೆ. ಆದರೆ ದಯಾಶಂಕರ್‌ರವರ ಹೇಳಿಕೆ ಗಮನಿಸಿದರೆ ಇದೆಲ್ಲ ಬೂಟಾಟಿಕೆ ಎಂಬುದು ಬಹಿರಂಗವಾಗಿದೆ. ದಯಾಸಿಂಗ್ ಅವರನ್ನು ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿಸಬೇಕೆಂದು ಧರಣಿನಿರತರು ಒತ್ತಾಯಿಸಿದ್ದಾರೆ. ಇದಲ್ಲದೇ ಗುಜರಾತ್, ಮಹಾರಾಷ್ಟ್ರ, ಬಿಹಾರ, ಕರ್ನಾಟಕದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಂಬೇಡ್ಕರ್‌ರನ್ನು ಹಾಡಿ ಹೊಗಳುವ ಇವರು ದಲಿತರ ಮೇಲೆ ದೌರ್ಜನ್ಯ ಮಾಡುವುದನ್ನು ನೋಡಿದರೆ ಇವರ ಆಷಾಢಭೂತಿತನ ಅರ್ಥವಾಗುತ್ತದೆ. ಪ್ರಧಾನಿ ಮೋದಿಯವರು ಈ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಬಿಎಸ್ಪಿಯ ಜಿಲ್ಲಾಧ್ಯಕ್ಷ ಪಿ.ಡಿ.ಸಾವಕ್ಕನವರ್, ಪ್ರಮುಖರಾದ ಮೃತ್ಯುಂಜಯ, ಬಿ.ರವಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News