×
Ad

ಶಿವಮೊಗ್ಗದಲ್ಲಿ ದಿಢೀರ್ ಜಲ ಪ್ರಳಯ...!

Update: 2016-07-27 22:48 IST

<ಬಿ. ರೇಣುಕೇಶ್

ಶಿವಮೊಗ್ಗ, ಜು. 27: ಶಿವಮೊಗ್ಗ ನಗರದ ಹಳೇ ಮಂಡ್ಲಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ, ಬುಧವಾರ ಚುಮುಚುಮು ಮುಂಜಾನೆಯ ವೇಳೆ ಅಕ್ಷರಶಃ ‘ಜಲ ಪ್ರಳಯ’ದ ಪರಿಸ್ಥಿತಿ ಸೃಷ್ಟಿಯಾಗಿ, ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕುವಂತಾಯಿತು.

ನಗರದ ಮೂಲಕ ಹಾದು ಹೋಗಿರುವ ತುಂಗಾ ಎಡದಂಡೆ ನಾಲೆಯ ಒಂದು ಬದಿಯ ಏರಿ ಒಡೆದು ಹೋದ ಪರಿಣಾಮದಿಂದ ಅಪಾರ ಪ್ರಮಾಣದ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವಂತಾಗಿತ್ತು. ಇದರಿಂದ ಗ್ರಾಮಸ್ಥರು ಕೃತಕ ಜಲಪ್ರಳಯದ ಪರಿಸ್ಥಿತಿ ಎದುರಿಸುವಂತಾಯಿತು. ಹಳೇ ಮಂಡ್ಲಿ, ಕುರುಬರ ಪಾಳ್ಯ, ಎನ್.ಟಿ. ರಸ್ತೆಯ ಎಡ-ಬಲ, ನ್ಯೂ ಮಂಡ್ಲಿಯ ಅಲ್ಪ ಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿದ್ದವು. ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಜನರು ತಾತ್ಕಾಲಿಕವಾಗಿ ಮನೆ ತೊರೆಯುವಂತಾಗಿತ್ತು. ಈ ನಡುವೆ ನೀರಿನ ರಭಸಕ್ಕೆ ಏಳು ಮನೆಗಳು ಕುಸಿದು ಬಿದ್ದಿತು. ಅಲ್ಲದೆ, ಹಲವು ಮನೆಗಳು ಧರಾಶಾಯಿಯಾಗುವ ಸ್ಥಿತಿಯಲ್ಲಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆ ಉಂಟಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಸ್ಥಳದಲ್ಲಿಯೇ ಬೀಡುಬಿಟ್ಟು ಪರಿಹಾರ ಕಾರ್ಯಾಚರಣೆ ನಡೆಸಿದರು. ಜಲಾವೃತವಾಗಿದ್ದ ಮನೆಗಳಲ್ಲಿದ್ದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಗಂಜಿ ಕೇಂದ್ರ, ಚಿಕಿತ್ಸಾ ಕೇಂದ್ರ ತೆರೆದು ಊಟೋಪಚಾರದ ವ್ಯವಸ್ಥೆ ಕಲ್ಪಿಸಿದರು. ಮತ್ತೊಂದೆಡೆ ತುಂಗಾ ಜಲಾಶಯದಿಂದ ಎಡದಂಡೆ ನಾಲೆಗೆ ಬಿಡಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಯಿತು. ಸಮರೋಪಾದಿಯಲ್ಲಿ ನಾಲೆಯ ದುರಸ್ತಿ ಕಾರ್ಯ ಆರಂಭಿಸಲಾಯಿತು. ಇದರಿಂದ ಮಧ್ಯಾಹ್ನದ ವೇಳೆ ಬಡಾವಣೆಗಳಲ್ಲಿ ನಿಂತಿದ್ದ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂತಾದರೂ ಸಂಪೂರ್ಣ ಪ್ರಮಾಣದಲ್ಲಿ ಜಲಮುಕ್ತವಾಗಿರಲಿಲ್ಲ.

ಏನಾಯ್ತು?:

ಕಳೆದ ಕೆಲ ದಿನಗಳಿಂದ ತುಂಗಾ ಎಡದಂಡೆ ನಾಲೆಗೆ ಗಾಜನೂರಿನ ತುಂಗಾ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಇದರಿಂದ ನಾಲೆಯು ತುಂಬಿ ಹರಿಯುತ್ತಿದೆ. ಈ ನಡುವೆ ಬುಧವಾರ ಮುಂಜಾನೆ 4 -5 ಗಂಟೆಯ ಸುಮಾರಿಗೆ ನಾಲೆಯ ಒಂದು ಬದಿಯ ಏರಿ ಕುಸಿದಿದೆ. ಇದರಿಂದ ಅಪಾರ ಪ್ರಮಾಣದ ನೀರು ತಗ್ಗು ಪ್ರದೇಶಗಳಿಗೆ ಹರಿಯಲಾರಂಭಿಸಿದೆ. ಬೆಳ್ಳಂಬೆಳಗ್ಗೆ ಶಿವಮೊಗ್ಗ - ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಎನ್.ಟಿ. ರಸ್ತೆ, ಹಳೇ ಮಂಡ್ಲಿ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ಹರಿದು ಬರಲಾರಂಭಿಸಿದೆ. ನೋಡನೋಡುತ್ತಿದ್ದಂತೆ ಮನೆಗಳು ಜಲಾವೃತವಾಗಲಾರಂಭಿಸಿವೆ. ಆಗಷ್ಟೆ ನಿದ್ರೆಯಿಂದೇಳುತ್ತಿದ್ದ ಜನರು ನೀರು ನುಗ್ಗುತ್ತಿರುವುದಕ್ಕೆ ಸ್ಪಷ್ಟ ಕಾರಣ ಗೊತ್ತಾಗದೆ ಆತಂಕಗೊಂಡು, ಮನೆಯಲ್ಲಿದ್ದ ಸರಕು-ಸರಂಜಾಮುಗಳನ್ನು ಹೊರತೆಗೆದುಕೊಂಡು ಹೋಗಲು ಹರಸಾಹಸ ನಡೆಸಿದರು. ಮತೊ್ತಂದೆಡೆ ಕ್ಷಣಕ್ಷಣದಿಂದ ಕ್ಷಣಕ್ಕೆ ನೀರಿನ ರಭಸ ಹೆಚ್ಚಾಗ ತೊಡಗಿದೆ. ವಿಷಯ ತಿಳಿಯು ತ್ತಿದ್ದಂತೆ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಕೇಶ್ ಕುಮಾರ್, ಉಪ ವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸರು ಆಗಮಿಸಿ ಮನೆಗಳಲ್ಲಿದ್ದ ಕೆಲ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಿದರು.

ನಿದ್ದೆಯಿಂದೇಳುವ ಮುನ್ನವೇ ಮನೆಗೆ ನುಗ್ಗಿದ ನೀರು...!!

ಹಳೇ ಮಂಡ್ಲಿಯ ಹಲವು ನಾಗರಿಕರನ್ನು ಬುಧವಾರ ಮುಂಜಾನೆ ನಿದ್ದೆಯಿಂದ ಎಚ್ಚರಿಸಿದ್ದ ನೀರು..?! ಹೌದು. ಬೆಳ್ಳಂಬೆಳಗ್ಗೆ ತುಂಗಾ ಎಡದಂಡೆ ನಾಲೆಯ ಏರಿ ಕುಸಿದು ಭಾರೀ ಪ್ರಮಾಣದ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದ ಪರಿಣಾಮ ನೂರಾರು ಮನೆಗಳು ಜಲಾವೃತವಾಗಿದ್ದವು. ಕೆಲ ನಿವಾಸಿಗಳಿಗೆ ಮನೆಯೊಳಗೆ ನೀರು ಬಂದಾಗಲೇ ಬಡಾವಣೆ ಜಲಾವೃತ ಗೊಂಡಿರುವ ವಿಷಯ ತಿಳಿಯಿತು. ಮತ್ತೆ ಕೆಲ ನಿವಾಸಿಗಳು ಮುಂಜಾನೆಯ ಸವಿ ನಿದ್ರೆಯಿಂದ ಎಚ್ಚರಗೊಳ್ಳುವುದಕ್ಕೆ ಮುನ್ನವೇ ಅವರನ್ನು ನೀರು ಎಚ್ಚರಿಸಿದೆ! ಒಟ್ಟಾರೆ ಹಳೇ ಮಂಡ್ಲಿ, ಕುರಬರಪಾಳ್ಯ, ನ್ಯೂ ಮಂಡ್ಲಿ ಬಡಾವಣೆ, ಎನ್.ಟಿ. ರಸ್ತೆ ಎಡ-ಬಲಗಳ ಸಾವಿರಾರು ನಿವಾಸಿಗಳ ದೈನಂದಿನ ಜೀವನ ಸಂಪೂರ್ಣವಾಗಿ ಬುಧವಾರ ಅಸ್ತವ್ಯಸ್ತಗೊಂಡಿತ್ತು. ತಮ್ಮದಲ್ಲದ ತಪ್ಪಿಗೆ ನಿವಾಸಿಗಳು ತೊಂದರೆಗೆ ಒಳಗಾಗಬೇಕಾಯಿತು.

ಹೆದ್ದಾರಿ ಜಲಾವೃತ

ಎನ್.ಟಿ. ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಇದರಿಂದ ಶಿವಮೊಗ್ಗ-ತೀರ್ಥಹಳ್ಳಿಯ ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದ ಕಾರಣ ವಾಹನಗಳನ್ನು ಬದಲಿ ಮಾರ್ಗದ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News