ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾದ ಭಟ್ಕಳ ಮಾರಿಕಾಂಬಾ ಜಾತ್ರೋತ್ಸವ
ಭಟ್ಕಳ, ಜು.28: ತಾಲೂಕಿನ ಪ್ರಸಿದ್ಧ ಮಾರಿಕಾಂಬಾ ಜಾತ್ರಾ ಮಹೋತ್ಸವ ಗುರುವಾರ ಸಂಪೂರ್ಣಗೊಂಡಿದ್ದು, ಮಾರಿಕಾಂಬೆಯ ಮೂರ್ತಿ ವಿಸರ್ಜನಾ ಮೆರವಣೆಗೆಯಲ್ಲಿ ಸೇರಿದ ಸಾವಿರಾರು ಭಕ್ತರಿಗೆ ತಂಪು ಪಾನಿಯಗಳನ್ನು ವಿತರಣೆ ಮಾಡುವುದರ ಮೂಲಕ ಇಲ್ಲಿನ ಮಗ್ದೂಮ್ ಕಾಲೋನಿಯ ಶಾಹಿನ್ ಸ್ಪೋರ್ಟ್ಸ್ ಸೆಂಟರ್‌ನ ಯುವಕರು ಹಿಂದೂ-ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಹಿನ್ ಸ್ಪೋರ್ಟ್ಸ್ ಕ್ಲಬ್‌ನ ಮುಖಂಡ ಹಾಗೂ ಪುರಸಭೆಯ ಸದಸ್ಯ ಮುಹಮ್ಮದ್ ಸಾದಿಕ್ ಮಟ್ಟಾ, ಭಟ್ಕಳ ಶಾಂತವಾಗಿದೆ. ಇಲ್ಲಿನ ಶಾಂತತೆಗೆ ಭಂಗವುಂಟು ಮಾಡುವ ಯಾವುದೇ ಘಟನೆಗಳನ್ನು ನಾವು ಸಹಿಸುವುದಿಲ್ಲ. ಇಲ್ಲಿನ ಹಿಂದೂ ಮುಸ್ಲಿಮರು ಪರಸ್ಪರ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ ಎನ್ನುವುದಕ್ಕೆ ಇಂದು ನಾವು ವಿತರಿಸಿದ ತಂಪು ಪಾನಿಯಗಳನ್ನು ಸ್ವೀಕರಿಸಿದ ಹಿಂದೂ ಬಾಂಧವರೇ ಸಾಕ್ಷಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ತಾರ್ ಮುಕ್ತೆಸರ್, ಅಸ್ರಾರ್ ಜಮ್ಶೇರ್, ರಾಫಿ ಮೊಹತೆಶಮ್, ಅಬ್ದುಸ್ಸಮಿ ಮೆಡಿಕಲ್ ಮುಂತಾದವರು ಉಪಸ್ಥಿತರಿದ್ದರು.