ಶಿವಮೊಗ್ಗ: ನೆರೆ ಇಳಿದ ಮೇಲೆ ಬದುಕು ಘನಘೋರ...

Update: 2016-07-28 16:21 GMT

<ರೇಣುಕೇಶ್

ಶಿವಮೊಗ್ಗ, ಜು.28: ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ. ಮನೆಯೊಳಗೆ ಕಾಲಿಡಲು ಆಗದಷ್ಟು ಕೆಸರು. ಎಲ್ಲೆಂದರಲ್ಲಿ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸರಕು-ಸರಂಜಾಮುಗಳು. ಕುಸಿದು ಬಿದ್ದಿರುವ ಮನೆಗಳು. ಧರಾಶಾಯಿಯಾಗುವ ಹಂತದಲ್ಲಿರುವ ಹಲವು ಮನೆಗಳು. ಸೂರು ಕಳೆದುಕೊಂಡು ಬೀದಿಗೆ ಬಿದ್ದವರ ಕಣ್ಣೀರು..ಅಧಿಕಾರಿ-ಜನಪ್ರತಿನಿಧಿಗಳ ಭೇಟಿ. ಸಾಂತ್ವನದ ಮಾತುಗಳು. ಮನೆಗಳ ಸ್ವಚ್ಚ ಕಾರ್ಯದಲ್ಲಿ ತಲ್ಲೀನವಾಗಿದ್ದ ನಾಗರಿಕರು..

   

ಇದು ಶಿವಮೊಗ್ಗ ನಗರದ ಹಳೆ ಮಂಡ್ಲಿ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಗುರುವಾರ ಕಂಡು ಬಂದ ದೃಶ್ಯಾವಳಿಗಳು. ಬುಧವಾರ ಮುಂಜಾನೆ ತುಂಗಾ ಎಡದಂಡೆಯ ಏರಿ ಕುಸಿದು ನುಗ್ಗಿದ ಭಾರೀ ಪ್ರಮಾಣದ ಜಲಧಾರೆ ಈ ಬಡಾವಣೆಗಳ ಅದೆಷ್ಟೋ ಬಡವರ ಬದುಕನ್ನೇ ಕೊಚ್ಚಿಕೊಂಡು ಹೋಗಿದೆ. ಏಕಾಏಕಿ ಬಂದೆರಗಿದ ಜಲ ಪ್ರಳಯವು ಹಲವರ ಜೀವನ ಬರ್ಬರವನ್ನಾಗಿ ಮಾಡಿದೆ. ಚಿಂತಾಕ್ರಾಂತರನ್ನಾಗಿಸಿದೆ. ಗಾಜನೂರಿನಿಂದ ನಾಲೆಗೆ ಹರಿ ಬಿಡುತ್ತಿದ್ದ ನೀರನ್ನು ಬೆಳಗ್ಗೆಯೇ ಸ್ಥಗಿತಗೊಳಿಸಲಾಯಿತು. ಆದಾಗ್ಯೂ ಮೊದಲೇ ಬಿಟ್ಟಿದ್ದ ನೀರು ಒಡೆದು ಹೋದ ನಾಲೆಯಿಂದ ಬುಧವಾರ ಮಧ್ಯಾಹ್ನದವರೆಗೂ ತಗ್ಗುಪ್ರದೇಶಗಳಿಗೆ ಹರಿದುಬರುತ್ತಲೇ ಇತ್ತು. ಸಂಜೆಯ ಹೊತ್ತಿಗೆ ನೀರಿನ ಹರಿವು ಕಡಿಮೆಯಾಯಿತು. ರಾತ್ರಿಯಾಗಿದ್ದ ಕಾರಣದಿಂದ ಅದೆಷ್ಟೊ ನಿವಾಸಿಗಳು ತಮ್ಮ ಮನೆಗೆ ಹೋಗಿರಲಿಲ್ಲ. ಗುರುವಾರ ತಮ್ಮ ಮನೆಗಳಿಗೆ ಹಿಂದಿರುಗಿದಾಗಲೇ ನೀರು ಸೃಷ್ಟಿಸಿದ್ದ ಅವಾಂ ತರದ ದರ್ಶನವಾಗಿದೆ. ದುಸ್ತರ:

ಬಹುತೇಕರ ಮನೆಯ ಕೆಳ ಭಾಗದಲ್ಲಿಟ್ಟಿದ್ದ ದವಸ-ಧಾನ್ಯಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.ದುರ್ವಾಸನೆ ಬರುತ್ತದೆ. ಕಸಕಡ್ಡಿಯ ರಾಶಿ ಕಂಡುಬರುತ್ತದೆ. ನೀರಿನೊಂದಿಗೆ ಕಪ್ಪೆ, ಕ್ರಿಮಿಕೀಟಗಳು, ಹಾವುಗಳು ಕೂಡಾ ಬಂದಿದು,್ದ ಕೆಲವರ ಮನೆಯೊಳಗೆ ಬೀಡುಬಿಟ್ಟಿದ್ದು ಕಂಡುಬಂದಿತು. ನಿಜಕ್ಕೂ ನಮ್ಮ ಬಡಾವಣೆಯ ಜನರ ಕಷ್ಟ ಯಾರಿಗೂ ಬರಬಾರದು. ಘನಘೋರ... ಎಂದು ಹಳೆ ಮಂಡ್ಲಿಯ ನಿವಾಸಿ ಮಂಜಪ್ಪನೋವಿನಿಂದ ಹೇಳುತ್ತಾರೆ. ಜಿಲ್ಲಾಡಳಿತದ ಮೂಲಗಳು ಹೇಳುವ ಪ್ರಕಾರ 12ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದು, 56 ಮನೆಗಳಿಗೆ ಭಾಗಶಃ ಹಾನಿಗೀಡಾಗಿವೆ. ಬೀಳುವ ಸ್ಥಿತಿಯಲ್ಲಿರುವ ಮನೆಗಳ ಕೆಲ ಮಾಲಕರು, ಮನೆಯ ದುರಸ್ತಿಗೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಮತ್ತೆ ಕೆಲವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮರೆಯಬೇಡಿ: ಜಲಾವೃತಕ್ಕೀಡಾದ ಬಡಾವಣೆಗಳಿಗೆ ಬುಧವಾರ ಹಾಗೂ ಗುರುವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದೊಡ್ಡ ದಂಡೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸಂತ್ರಸ್ತರ ಅಹವಾಲು ಆಲಿಸುತ್ತಿದೆ. ಅಗತ್ಯ ನೆರವು ನೀಡುವ ಭರವಸೆ ನೀಡಿ ಹಿಂದಿರುಗುತ್ತಿದೆ. ಇದೇ ಕಾಳಜಿ ಅವರಿಗೆ ಸೌಲಭ್ಯ ಕಲ್ಪಿಸುವುದರತ್ತಲೂ ಇರಬೇಕು. ಕೇವಲ ಭರವಸೆ ನೀಡಿ ಕೈತೊಳೆದುಕೊಳ್ಳಬಾರದು. ಕಾಲಮಿತಿಯೊಳಗೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವುದರತ್ತ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯತ್ನ ಮಾಡಬೇಕು. ಇದು ಅವರ ಆದ್ಯ ಕರ್ತವ್ಯ ಆಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸುತ್ತಾರೆ.

ಗಂಜಿ ಕೇಂದ್ರಗಳ ಮುಂದುವರಿಕೆ...: ಜಲಾವೃತಕ್ಕೀಡಾದ ಹಳೆ ಮಂಡ್ಲಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಬುಧವಾರದಿಂದ ಜಿಲ್ಲಾ ಡಳಿತ ಹಳೆ ಮಂಡ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆದಿ ರುವ ಎರಡು ಗಂಜಿ ಕೇಂದ್ರ ಗಳನ್ನು ಗುರುವಾರ ಕೂಡ ಮುಂದುವರಿಸ

ಾಗಿದೆ. ಬೆಳಗ್ಗೆಯಿಂದಲೇ ಗಂಜಿ ಕೇಂದ್ರಗಳಲ್ಲಿ ಟೀ, ಕಾಫಿ, ಉಪಾಹಾರವನ್ನು ನಾಗರಿಕರಿಗೆ ನೀಡಲಾಯಿತು. ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಜಿಲ್ಲಾಡಳಿತದ ಮುಂದಿನ ಸೂಚನೆಯ ನಂತರ ಗಂಜಿ ಕೇಂದ್ರ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಾಲೂಕು ಆಡಳಿತದ ಮೂಲಗಳು ಮಾಹಿತಿ ನೀಡುತ್ತವೆ. ಅದೇ ರೀತಿಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಕೂಡ ಮುಂದುವರಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ಔಷಧೋಪಚಾರ ನೀಡಲಾಗುತ್ತಿದೆ. ಹಲವು ಅಧಿಕಾರಿಗಳ ತಂಡವು ಕೂಡ ಸ್ಥಳದಲ್ಲಿಯೇ ಬೀಡುಬಿಟ್ಟು ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News