ಮಾನಸಿಕ ಅಸ್ವಸ್ಥತೆ ಗುಣಪಡಿಸಲು ಸಾಧ್ಯ: ನ್ಯಾ.ನಂದಕುಮಾರ್
ಚಿಕ್ಕಮಗಳೂರು,ಜು.28: ದೇಹಕ್ಕೆ ಕಾಯಿಲೆಗಳು ಬರುವಂತೆ ಮನುಷ್ಯನ ಮನಸ್ಸಿಗೂ ಕಾಯಿಲೆಗಳು ಬರುವುದು ಸಾಮಾನ್ಯ. ದೈಹಿಕ ಕಾಯಿಲೆಯನ್ನು ನಿವಾರಿಸುವಂತೆ ಉತ್ತಮ ಚಿಕಿತ್ಸೆಯಿಂದ ಮನೋರೋಗವನ್ನು ಗುಣಪಡಿಸಲು ಸಾಧ್ಯವಿದೆ ಎಂದು ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ. ನಂದಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದ ಕಾರ್ಪೊರೇಶನ್ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆ, ವಕೀಲರ ಸಂಘ ಮತ್ತು ಕಾರ್ಪೊರೇಶನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮಾನಸಿಕ ಅಸ್ವಸ್ಥ ಮತ್ತು ಮಾನಸಿಕ ದೌರ್ಬಲ್ಯರಿಗೆ ದೊರಕುವ ಕಾನೂನು ನೆರವು ಯೋಜನೆ ಕುರಿತು ಹಾಗೂ ಹೆಣ್ಣು ಮಗುವಿನ ರಕ್ಷಣೆ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು. ಹೆಣ್ಣು ಭ್ರೂಣ ಹತ್ಯೆ ತಡೆಯ ಕಾಯ್ದೆಗಿಂತ ಜನರ ಮನೋಭಾವದಲ್ಲಿರುವ ಹೆಣ್ಣು ಮಗುವಿನ ಬಗೆಗಿನ ತಿರಸ್ಕಾರ ದೂರವಾಗಬೇಕು ಎಂದ ಅವರು, ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮನಾಗಿ ಕಾಣಬೇಕು ಎಂದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ದಯಾನಂದ್ ವಿ.ಹಿರೇಮಠ್ ಮಾತನಾಡಿ, ಮಾನಸಿಕ ಅಸ್ವಸ್ಥರು ಎಂಬ ಕಾರಣದಿಂದ ಬೀದಿ ಪಾಲಾದವರನ್ನು ಮಾನಸಿಕ ಸ್ವಾಸ್ಥತೆಯನ್ನು ಗುಣಪಡಿಸಲು ಜನ ಸಾಮಾನ್ಯರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವುದರಿಂದ ಕಾನೂನಿನ ಅಡಿ ಅವರಿಗೆ ರಕ್ಷಣೆ ಹಾಗೂ ವೈದ್ಯೋಪಚಾರ ಸಿಗಲಿದೆ ಎಂದರು. ನ್ಯಾಯವಾದಿ ಡಿ.ಬಿ.ಸುಜೇಂದ್ರ ಮಾನಸಿಕ ಅಸ್ವಸ್ಥ ಮತ್ತು ಮಾನಸಿಕ ದೌರ್ಬಲ್ಯರಿಗೆ ಕಾನೂನಿನ ನೆರವು ಎಂಬ ವಿಷಯದ ಬಗ್ಗೆ ಹಾಗೂ ನ್ಯಾಯವಾದಿ ಎಚ್.ಸಿ ನಟರಾಜ್ ಅವರು ಹೆಣ್ಣು ಮಗುವಿನ ರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎನ್. ಆರ್.ತೇಜಸ್ವಿ ಉಪಸ್ಥಿತರಿದ್ದರು. ಶಶಿಕಲಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಎಸ್.ಪಿ.ಸುರೇಶ್ ಸ್ವಾಗತಿಸಿ, ರಶ್ಮಿ ನಿರೂಪಿಸಿ, ಪಿ. ಗಂಗಾಧರ್ ವಂದಿಸಿದರು.