ಶಿವಮೊಗ್ಗ: ವಿವಿಧ ಸಂಘಟನೆಗಳಿಂದ ಪ್ರತ್ಯೇಕ ಧರಣಿ
ಶಿವಮೊಗ್ಗ, ಜು. 28: ಉತ್ತರ ಕರ್ನಾಟಕದ 4 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ನಾಲ ವಿವಾದದ ಸಂಬಂಧ ರಚಿಸಲಾಗಿದ್ದ ನ್ಯಾಯಾಧಿಕರಣ ತನ್ನ ಮಧ್ಯಾಂತರದ ತೀರ್ಪಿನಲ್ಲಿ ಕರ್ನಾಟಕಕ್ಕೆ ವ್ಯತಿರಿಕ್ತವಾದ ತೀರ್ಪು ನೀಡಿರುವುದಕ್ಕೆ ಶಿವಮೊಗ್ಗ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿ ಧರಣಿ ನಡೆಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ -ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದವು.
ಕರ್ನಾಟಕ ರಾಜ್ಯ ರೈತ ಸಂಘದ ಎರಡು ಬಣಗಳು, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸಂಯುಕ್ತಾಶ್ರಯವಾಗಿ ಪ್ರತಿಭಟನೆ ನಡೆಸಿದವು. ಈ ಹಿನ್ನೆಲೆಯಲ್ಲಿ ಡಿ.ಸಿ. ಕಚೇರಿ ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ರೈತ ಸಂಘ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎರಡು ಬಣಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಎಚ್.ಆರ್.ಬಸವರಾಜಪ್ಪ ನೇತೃತ್ವದ ರೈತ ಸಂಘದ ಬಣವು ಪ್ರತಿಭಟನಾ ರ್ಯಾಲಿಯ ಮೂಲಕ ಡಿ.ಸಿ. ಕಚೇರಿಗೆ ಆಗಮಿಸಿತು. 5 ವರ್ಷಗಳಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬರಗಾಲ ಎದುರಾಗಿ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ಆದರೆ ರಾಷ್ಟ್ರೀಯ ಜಲ ನೀತಿ ರೂಪಿಸಲು ಸ್ವಾತಂತ್ರ್ಯ ಬಂದು 70 ವರ್ಷವಾದರೂ ಸಾಧ್ಯವಾಗಿಲ್ಲ. ಇದರಿಂದಾಗಿ ಯಾವುದೇ ಜಲ ವಿವಾದ ಇತ್ಯರ್ಥವಾಗುತ್ತಿಲ್ಲ ಎಂದು ಸಂಘಟನೆಗಳು ಆಪಾದಿಸಿವೆ. ಅಂತಾರಾಜ್ಯ ನೀರು ಹಂಚಿಕೆಯ ವಿಚಾರ ನ್ಯಾಯ ಮಂಡಳಿಯ ಮುಂದೆ ಬಂದಾಗ ಸರಕಾರಗಳು ತಮ್ಮ ಪಾತ್ರವಿಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ. ಮಹಾದಾಯಿ ನದಿ ಪಾತ್ರದಲ್ಲಿ ಸುಮಾರು 200 ಟಿಎಂಸಿಯಷ್ಟು ನೀರು ಸಮುದ್ರಕ್ಕೆ ಪೋಲಾಗುತ್ತಿದ್ದರೂ, ಕರ್ನಾಟಕಕ್ಕೆ ಅದನ್ನು ನೀಡುವಲ್ಲಿ ಗೋವಾ ಸರಕಾರ ಒಪ್ಪುತ್ತಿಲ್ಲ. ಕರ್ನಾಟಕದ ಅರ್ಜಿಯನ್ನು ನ್ಯಾಯಾಧಿಕರಣ ವಜಾ ಮಾಡಿರುವುದು ಹಾಸ್ಯಾಸ್ಪದ ಎಂದು ಸಂಘಟನೆಗಳು ದೂರಿವೆ.
ಪ್ರಧಾನಮಂತ್ರಿ ಕೂಡಲೇ ಮಧ್ಯಪ್ರವೇಶ ಮಾಡುವುದರ ಮೂಲಕ ಅಂತಾರಾಜ್ಯ ನೀರಿನ ವಿವಾದಗಳನ್ನು ಕೂಡಲೇ ಬಗೆಹರಿಸಬೇಕು. ಅಂತಿಮ ತೀರ್ಪಿನವರೆಗೆ ಕಾಯ್ದೆ ಕೂಡಲೇ ಕರ್ನಾಟಕಕ್ಕೆ ಬೇಕಾಗಿರುವ 7.56 ಟಿಎಂಸಿ ನೀರನ್ನು ಕೊಡಿಸಲು ಮುಂದಾಗಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ. ಜಯಕರ್ನಾಟಕ: ಬುಧವಾರ ಪ್ರಕಟವಾದ ಮಧ್ಯಾಂತರ ತೀರ್ಪು ರಾಜ್ಯದ ಹೋರಾಟಗಾರರಿಗೆ ಹಿನ್ನಡೆ ಉಂಟುಮಾಡಿದೆ. ಕೇಂದ್ರ ಸರಕಾರ ಕರ್ನಾಟಕದ ಜನತೆಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. ಕೇಂದ್ರ ಹಾಗೂ ಗೋವಾ ಸರಕಾರಗಳ ಈ ವಿರೋಧಿ ನೀತಿ ಖಂಡನೀಯ ಎಂದು ಜಯಕರ್ನಾಟಕ ಸಂಘಟನೆ ಹೇಳಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ, ಸಮಸ್ತ ರೈತರ ಹೋರಾಟವನ್ನು ತಮ್ಮ ಸಂಘಟನೆ ಬೆಂಬಲಿಸುತ್ತದೆ. ಯಾವುದೇ ಸರಕಾರವಿದ್ದರೂ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಡಾ. ದೀಪಕ್, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಡಿ.ಜಿ. ಪರಶುರಾಮ, ನಗರಾಧ್ಯಕ್ಷ ಕೆ. ವಿನೋದ್ ಮತ್ತಿತರರು ಉಪಸ್ಥಿತರಿದ್ದರು.
ಕರವೇ:
ಕರ್ನಾಟಕ ಬೇಡಿಕೆ ಇಟ್ಟಿರುವ 7.56 ಟಿಎಂಸಿ ನೀರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು. ರಾಜ್ಯದ ಪರ ವಕೀಲರು ಸಮರ್ಥ ವಾದ ಮಂಡನೆ ಮಾಡುವಲ್ಲಿ ವಿಫಲರಾಗಿದ್ದು ಕಂಡು ಬರುತ್ತಿದೆ. ನದಿ ವಿಚಾರ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವುದರಿಂದ ಕನ್ನಡಿಗರು ಎಷ್ಟೇ ಹೋರಾಡಿದರು ನ್ಯಾಯ ಸಿಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ. ಸಂಘಟನೆಯ ಪ್ರಮುಖರಾದ ಎಚ್.ಎಸ್.ಕಿರಣ್‌ಕುಮಾರ್,ಮುರುಗನ್, ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.