ರಾಜ್ಯದ ಸಂಸದರು ರಾಜೀನಾಮೆ ನೀಡಲಿ: ಮಂಜುನಾಥ ಗೌಡ
ಸೊರಬ,ಜು.28: ಮಹಾದಾಯಿ ನ್ಯಾಯಾಧಿಕರಣದ ಮಧ್ಯಾಂತರ ತೀರ್ಪಿನಿಂದ ರಾಜ್ಯಕ್ಕೆ ಹಿನ್ನಡೆಯಾಗಿದ್ದು, ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಪಕ್ಷಭೇದ ಮರೆತು ಸಾಮೂಹಿಕ ರಾಜೀನಾಮೆ ನೀಡಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಪ್ರತಿಭಟನೆಗೆ ಮುಂದಾಗಬೇಕೆಂದು ರೈತ ಸಂಘದ ರಾಜ್ಯ ಪ್ರಾಧಾನ ಕಾರ್ಯದರ್ಶಿ ಮಂಜುನಾಥ ಗೌಡ ಕರೆ ನೀಡಿದರು.
ಮಹಾದಾಯಿ ನ್ಯಾಯಾಧೀಕರಣದ ಮಧ್ಯಾಂತರ ತೀರ್ಪುನ್ನು ಖಂಡಿಸಿ ತಾಲೂಕು ರೈತ ಸಂಘದ ವತಿಯಿಂದ ಗುರವಾರ ಪಟ್ಟಣದ ಶ್ರೀ ರಂಗನಾಥ ದೇವಾಲಯದ ಮುಂಭಾಗದಿಂದ ದ್ವಿಚಕ್ರ ವಾಹನಗಳ ಮೂಲಕ ಮೆರವಣಿಗೆ ನಡೆಸಿ, ಪಪಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ತೀರ್ಪಿನ ವಿರುದ್ಧ ಒಂದೇ ಒಂದು ಚಕಾರ ಎತ್ತಿಲ್ಲ. ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ, ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ತಿಳಿದಿದ್ದರೂ ಸುಮ್ಮನಿದ್ದಾರೆ, ಮಾನ ಮರ್ಯಾದೆ ಏನಾದರೂ ಇದ್ದರೆ ರಾಜೀನಾಮೆ ಕೊಟ್ಟು ರೈತರ ಹಿತ ಕಾಯಲು ಮುಂದಾಗಲಿ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ್ ಪಾಟೀಲ್ ಮಾತನಾಡಿ, ಶಾಂತಿಯುತವಾಗಿ ಪ್ರತಿಭಟಿಸುವುದೇ ರೈತ ಸಂಘದ ಗುರಿಯಾಗಿದೆ. ಇತ್ತೀಚೆಗೆ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಅಪಾರ ಹಾನಿ ಉಂಟಾಗಿದೆ. ಕೋಟಿಗಟ್ಟಲೆ ಹಣ ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಅಂದು ಯಾವುದೇ ಕ್ರಮಕ್ಕೆ ಮುಂದಾಗದ ಪೊಲೀಸರು, ಇಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ನಮ್ಮ ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಕ್ರಮ ಖಂಡನೀಯ ಎಂದರು.
ಈ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ವೀರಭದ್ರ ಗೌಡ, ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ, ಮಾವಲಿ ವಿರೇಶ್ ಗೌಡ, ಪಕ್ಕಿರ್ ಸ್ವಾಮಿ, ಆನವಟ್ಟಿ ಹನುಮಂತಪ್ಪ, ಚಂದ್ರಶೇಖರ್ ಗೌಡ, ಮತ್ತಿತರರು ಉಪಸ್ಥಿತರಿದ್ದರು.