×
Ad

ಮಹಾದಾಯಿ ಅನ್ಯಾಯ ವಿರೋಧಿಸಿ ಜು.30 ’ಕರ್ನಾಟಕ ಬಂದ್’

Update: 2016-07-29 18:24 IST

ಬೆಂಗಳೂರು, ಜು.29: ಮಹಾದಾಯಿ ನ್ಯಾಯಾಧೀಕರಣವು ರಾಜ್ಯ ಸರಕಾರದ ಮಧ್ಯಾಂತರ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶನಿವಾರ(ಜು.30) ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕನ್ನಡ ಚಲನಚಿತ್ರ ರಂಗ, ಬಿಎಂಟಿಸಿ, ಕೆಎಸ್ಸಾರ್ಟಿಸಿ ನೌಕರರ ಸಂಘ, ರಾಜ್ಯ ಸರಕಾರಿ ನೌಕರರ ಸಂಘ, ಬಿಡಿಎ ನೌಕರರ ಸಂಘ, ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ , ಅಖಿಲ ಕರ್ನಾಟಕ ಪೆಟ್ರೋಲ್ ಬಂಕ್ ಮಾಲಕರ ಸಂಘ, ಹೊಟೇಲ್ ಮಾಲಕರ ಸಂಘ ಸೇರಿದಂತೆ ಸಾವಿರಾರು ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿವೆ.

 ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಹಾದಾಯಿ, ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಯನ್ನು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪ್ರಧಾನಮಂತ್ರಿ ನರೇಂದ್ರಮೋದಿ ಬಗೆಹರಿಸಬೇಕು ಎಂದು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಆಗ್ರಹಿಸಿದ್ದಾರೆ.

 ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರಕಾರ ಹಾಗೂ ಪ್ರಧಾನಮಂತ್ರಿ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದಾಗಿ ಮುಂದುವರೆಯಬೇಕು ಎಂದು ಕರೆ ನೀಡಿದರು. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಕನ್ನಡ ಚಲನಚಿತ್ರ ರಂಗವು ತನ್ನ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಲಿದೆ. ಚಲನಚಿತ್ರ ಮಂದಿರಗಳಲ್ಲಿ ಯಾವುದೆ ಚಿತ್ರಗಳ ಪ್ರದರ್ಶನ ಇರುವುದಿಲ್ಲ. ನಾಳೆ ಬೆಳಗ್ಗೆ 10 ಗಂಟೆಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ ಉದ್ಯಾನವನದವರೆಗೆ ಕಲಾವಿದರು ಪ್ರತಿಭಟನಾ ರ್ಯಾಲಿಯನ್ನು ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಎಲ್ಲ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಎಲ್ಲರಿಗೂ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ. ಪಿವಿಆರ್ ಸೇರಿದಂತೆ ಎಲ್ಲ ಮಲ್ಟಿಪ್ಲೆಕ್ಸ್‌ಗಳು, ಮಾಲ್‌ಗಳು ಬಂದ್‌ಗೆ ಕೈ ಜೋಡಿಸಲಿದ್ದಾರೆ. ರಾಜ್ಯದ ಪರವಾದ ಹೋರಾಟದಲ್ಲಿ ಪಾಲ್ಗೊಳ್ಳುವುದು ಎಲ್ಲರ ಕರ್ತವ್ಯ. ನಾಡಿನ ನೆಲ, ಜಲ ವಿಚಾರದಲ್ಲಿ ನಾವೆಲ್ಲರೂ ಒಂದಾಗಿ ಮುಂದುವರೆಯಬೇಕು ಎಂದು ಸಾ.ರಾ.ಗೋವಿಂದು ಕರೆ ನೀಡಿದರು.
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬೆಂಬಲ: ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿಯ ಚಾಲಕರು ಹಾಗೂ ನಿರ್ವಾಹಕರು ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಯಾವುದೆ ಬಸ್ಸುಗಳು ಸಂಚರಿಸುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.
ರಾಜ್ಯ ಸರಕಾರಿ ನೌಕರರ ಸಂಘದ ಸಾಥ್   : ಮಹಾದಾಯಿ ನದಿ ಕುಡಿಯುವ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿಯು ನೀಡಿರುವ ಮಧ್ಯಾಂತರ ತೀರ್ಪನ್ನು ರಾಜ್ಯ ಸರಕಾರಿ ನೌಕರರ ಸಂಘವು ತೀವ್ರವಾಗಿ ಖಂಡಿಸಿದೆ. ನದಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿಯು ತಾಳಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯ ಸರಕಾರಿ ನೌಕರರ ಸಂಘವು ಬೆಂಬಲ ವ್ಯಕ್ತಪಡಿಸಿದೆ.

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಕುಡಿಯುವ ನೀರಿನ ಹಿತರಕ್ಷಣೆಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್‌ಗೆ ಸಮಸ್ತ ರಾಜ್ಯ ಸರಕಾರಿ ನೌಕರರು ಸಂಪೂರ್ಣ ಸಹಕಾರ ನೀಡುವಂತೆ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಮನವಿ ಮಾಡಿದ್ದಾರೆ. ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ಗಳ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಐಟಿ, ಬಿಟಿ ಕಂಪೆನಿಗಳಿಗೆ ಮ್ಯಾಕ್ಸಿಕ್ಯಾಬ್ ಸೇವೆ ಲಭ್ಯವಾಗುವುದಿಲ್ಲ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ತೆರಳುವ ಟ್ಯಾಕ್ಸಿ ಸೇವೆಯೂ ಸ್ಥಗಿತಗೊಳ್ಳಲಿದೆ.
ಪೆಟ್ರೋಲ್ ಬಂಕ್ ಬಂದ್ : ಅಖಿಲ ಕರ್ನಾಟಕ ಪೆಟ್ರೋಲ್ ಬಂಕ್ ಮಾಲಕರ ಸಂಘವು ಬಂದ್‌ಗೆ ಬೆಂಬಲ ನೀಡಿರುವುದರಿಂದ ಬೆಂಗಳೂರಿನ 400 ಸೇರಿದಂತೆ ರಾಜ್ಯದ 3200 ಪೆಟ್ರೋಲ್ ಬಂಕ್‌ಗಳು ಬೆಳಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ಮುಚ್ಚಿರಲಿವೆ ಎಂದು ಸಂಘದ ಕಾರ್ಯದರ್ಶಿ ರಂಜೀತ್ ಹೆಗಡೆ ತಿಳಿಸಿದ್ದಾರೆ.
ಮೆಟ್ರೊ ಸಂಚಾರ: ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘವು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಮೆಟ್ರೊ ರೈಲು ಮಾತ್ರ ಸಂಚಾರ ನಡೆಸಲಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪ್ರತಿ ಒಂದು ಗಂಟೆಗೆ 15 ರೈಲುಗಳನ್ನು ಸಂಚರಿಸಲು ಉದ್ದೇಶಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಪ್ರತಿ ನಾಲ್ಕು ನಿಮಿಷಗಳಿಗೆ ಒಂದು ರೈಲು ಸಂಚರಿಸಲು ಮೆಟ್ರೊ ನಿಗಮ ನಿರ್ಧರಿಸಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಎಲ್ಲ ಆಸ್ಪತ್ರೆಗಳು, ಮೆಡಿಕಲ್‌ಶಾಪ್‌ಗಳು, ತರಕಾರಿ, ಹಣ್ಣಿನ ಮಾರುಕಟ್ಟೆಗಳು ಎಂದಿನಂತೆ ತೆರೆದಿರಲಿವೆ. ರಾಜ್ಯಾದ್ಯಂತ ಹಾಲು ಪೂರೈಕೆಗೆ ಯಾವುದೆ ಅಡ್ಡಿಯಿರುವುದಿಲ್ಲ. ಆಂಬ್ಯುಲೆನ್ಸ್ ಸೇವೆಯೂ ಲಭ್ಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News