×
Ad

ಹೆಚ್ಚಳಗೊಳಿಸಿರುವ ಕರವನ್ನು ರದ್ದುಗೊಳಿಸಲು ಒತ್ತಾಯಿಸಿ ಮನವಿ

Update: 2016-07-29 22:07 IST

ಶಿಕಾರಿಪುರ, ಜು.29: ಗ್ರಾಮ ಪಂಚಾಯತ್ ವತಿಯಿಂದ ನೀರು, ಮನೆ ಕಂದಾಯ, ಖಾತೆ ಬದಲಾವಣೆ ಮತ್ತಿತರ ಕರಗಳನ್ನು ಏಕಾಏಕಿ ಹೆಚ್ಚಳಗೊಳಿಸಲಾಗಿದ್ದು ಗ್ರಾಮದಲ್ಲಿ ಅಧಿಕವಾಗಿರುವ ಕಡುಬಡವರಿಗೆ ಇದರಿಂದಾಗಿ ತೀವ್ರ ಆರ್ಥಿಕ ಹೊರೆಯಾಗುತ್ತಿದೆ.

ಸರಕಾರದ ಸುತ್ತೋಲೆಯಿಲ್ಲದೆ ಹೆಚ್ಚಳಗೊಳಿಸಲಾಗಿರುವ ಕರವನ್ನು ರದ್ದುಗೊಳಿಸಿ ಬಡ ಗ್ರಾಮಸ್ಥರನ್ನು ಕಾಪಾಡುವಂತೆ ತಾಲೂಕಿನ ತರಲಘಟ್ಟ ಗ್ರಾಪಂ ವ್ಯಾಪ್ತಿಯ ಭದ್ರಾಪುರ, ತಿಮ್ಲಾಪುರ, ಹೊಸ ಹಾಗೂ ಹಳೇದೂಪದಹಳ್ಳಿ ಗ್ರಾಮಸ್ಥರು ಗುರುವಾರ ಗ್ರಾಪಂ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

  ತಾಲೂಕಿನ ತರಲಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಈ ಹಿಂದೆ ನೀರು ಹಾಗೂ ಮನೆ ಕಂದಾಯ 170 ರೂ. ಖಾತೆ ಬದಲಾವಣೆಗೆ 250 ರೂ. ನಿಗದಿಪಡಿಸಿದ್ದು ಇದೀಗ ಏಕಾಏಕಿ ನೀರು, ಮನೆ ಕಂದಾಯವನ್ನು 350 ರೂ. ಖಾತೆ ಬದಲಾವಣೆಗೆ 800 ರೂ.ಕಂದಾಯವನ್ನು ಹೆಚ್ಚಳಗೊಳಿಸುವ ಜತೆಗೆ ಮನೆಗೆ ಸ್ವಂತ ನಲ್ಲಿಗೆ 2,000ದಿಂದ 3,000 ರೂ. ಗೆ ಹೆಚ್ಚಳಗೊಳಿಸಲಾಗಿದೆ ಎಂದು ಗ್ರಾಪಂ ಮಾಜಿ ಸದಸ್ಯ ಸುರೇಶ್ ನೇತೃತ್ವದಲ್ಲಿ ವ್ಯಾಪ್ತಿಯ ಗ್ರಾಮಸ್ಥರು ಅಳಲು ತೋಡಿಕೊಂಡರು,

2015-16ನೆ ಸಾಲಿನ ಬಸವ, ಇಂದಿರಾ ಆವಾಝ್ ಯೋಜನೆಯಡಿ ಗ್ರಾಪಂಗೆ ಮನೆ ಮಂಜೂರಾಗಿದ್ದು, ಕಳೆದ ಜ.5ರಂದು ನಡೆದ ಗ್ರಾಮ ಸಭೆಯಲ್ಲಿ ಆಯ್ಕೆಗೊಳಿಸಿ ಸರಕಾರದ ಅನುಮೋದನೆಗಾಗಿ ಕಳುಹಿಸಲಾದ 35 ಲಾನುಭವಿಗಳನ್ನು ಇದೀಗ ಅಧ್ಯಕ್ಷೆ ನೇತ್ರಾವತಿ ಯವರು ರದ್ದುಗೊಳಿಸಿ ಹೊಸ ಅರ್ಜಿ ಸಲ್ಲಿಕೆಗೆ ಸಿದ್ಧರಾಗುತ್ತಿದ್ದಾರೆ. ಇಂತಹ ಬಡ ಜನ ವಿರೋಧಿ ವರ್ತನೆಯನ್ನು ತಿದ್ದಿಕೊಂಡು ಈ ಹಿಂದೆ ಆಯ್ಕೆಗೊಳಿಸಿದ ಲಾನುಭವಿಗಳಿಗೆ ಯೋಜನೆಯಡಿ ಮನೆ ಮಂಜೂರಾತಿ ಕ್ರಮಕ್ಕೆ ಆಗ್ರಹಿಸಿದರು.

ಪಟ್ಟಣಕ್ಕೆ ಸಮೀಪವಿರುವ ಗ್ರಾಪಂ ವ್ಯಾಪ್ತಿಯಲ್ಲಿ ಹಲವು ವಾಣಿಜ್ಯ ಘಟಕಗಳು, ಶಿಕ್ಷಣ ಸಂಸ್ಥೆಗಳಿದ್ದು, ಇವುಗಳ ಆದಾಯ ಹೆಚ್ಚಿರುವ ಗ್ರಾಪಂ ಬಡಜನತೆ ವಿರುದ್ಧದ ನಿಲುವು ಕೈಬಿಟ್ಟು ಹೆಚ್ಚಳಗೊಳಿಸಿರುವ ನೀರು, ಮನೆ ಕಂದಾಯ, ಖಾತೆ ಬದಲಾವಣೆಗೆ ಕರವನ್ನು ರದ್ದುಗೊಳಿಸಿ ಯಥಾ ರೀತಿಯಲ್ಲಿಯೇ ಮುಂದುವರಿಸುವಂತೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಚಂದ್ರಪ್ಪ ಪೂಜಾರಿ, ಮಾಜಿ ಸದಸ್ಯೆ ಹುಲುಗಮ್ಮ, ಲಕ್ಷ್ಮೀ ಕಾಂತರಾಜ್, ಕೃಷ್ಣಪ್ಪ, ಮಹದೇವ,ರಾಮಣ್ಣ,ವಸಂತಪ್ಪ, ರವಿಕುಮಾರ್, ಧನರಾಜ್, ಬೊಮ್ಮಣ್ಣ, ಹುಚ್ಚಪ್ಪ, ಗಿರೀಶ, ಮಂಜಪ್ಪ, ಓಬಣ್ಣ, ಲಕ್ಷ್ಮಣಪ್ಪ, ಕಾವೇರಮ್ಮ,ನಾಗರಾಜ, ದುರುಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News