×
Ad

ಸ್ವಚ್ಛತೆ ಬಗ್ಗೆಹೆಚ್ಚಿನ ಗಮನಹರಿಸಲು ಸೂಚನೆ

Update: 2016-07-29 22:07 IST

ಸಾಗರ, ಜು.29: ಇಲ್ಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಹಾಸ್ಟೆಲ್ ಮೇಲ್ವಿಚಾರಕಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್ ಸೂಕ್ತ ನಿರ್ವಹಣೆ ಇಲ್ಲದಿರುವುದು, ಮಳೆಗಾಲದಲ್ಲಿ ಸೋರುತ್ತಿರುವುದು, ಹಾಳಾಗಿದ್ದ ತರಕಾರಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥ ಬಳಕೆ ಮಾಡದಿರುವುದು, ವಾಟರ್ ಫಿಲ್ಟರ್ ಹಾಳಾಗಿ ತಿಂಗಳು ಕಳೆದಿದ್ದರೂ ರಿಪೇರಿ ಮಾಡದಿರುವುದು, ಅಶುಚಿತ್ವ ಇನ್ನಿತರ ಅವ್ಯವಸ್ಥೆಗಳನ್ನು ನೋಡಿದ ಜಿಲ್ಲಾಧಿಕಾರಿಗಳು ತಬ್ಬಿಬ್ಬುಗೊಂಡರು. ವಿದ್ಯಾರ್ಥಿನಿಲಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುತ್ತಿದೆ. ಆದರೂ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ಇಲ್ಲಿನ ಪರಿಸ್ಥಿತಿ ನೋಡಿದರೆ ತಿಳಿಯುತ್ತದೆ. ಮೊದಲು ಹಾಸ್ಟೆಲ್ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಯ್ದುಕೊಳ್ಳುವತ್ತ ಹೆಚ್ಚಿನ ಗಮನಹರಿಸಿ. ವಿಶಾಲವಾದ ಜಾಗ ಇದೆ. ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ತರಕಾರಿ, ಹೂವು ಇನ್ನಿತರೆಗಳನ್ನು ಬೆಳೆಯುವ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಮೊದಲು ನಮ್ಮ ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಬೇಕು. ಖಾಸಗಿ ಶಾಲೆಗಳಿಗೆ ಹೋಲಿಕೆ ಮಾಡಿದಾಗ ಸರಕಾರಿ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರು ಹಾಗೂ ಶೈಕ್ಷಣಿಕ ಸೌಲಭ್ಯ ಇರುತ್ತದೆ. ಅಲ್ಲಿ ಕಲಿತ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅವರಿಗೆ ಉತ್ತಮ ಸೌಲಭ್ಯ ಕೊಡುವ ಬಗ್ಗೆ ಎಲ್ಲ ಹಾಸ್ಟೆಲ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಪ್ರಮಾಣ ತೀರ ಕಡಿಮೆ ಇದೆ. ಕುಡಿಯುವ ನೀರಿಗೆ ಮುಂದಿನ ವರ್ಷ ತೊಂದರೆ ಆಗದಂತೆ ಅಗತ್ಯಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ನೀರಾವರಿ ಜಮೀನುಗಳ ರೈತರು ಸಮಸ್ಯೆ ಅನುಭವಿಸುವಂತೆ ಆಗಿದೆ ಎಂದರು. ಬಗರ್‌ಹುಕುಂ ಹಾಗೂ ಅರಣ್ಯಹಕ್ಕು ಕಾಯ್ದೆ ದುರುಪಯೋಗವಾಗದಂತೆ ನೋಡಿಕೊಳ್ಳಲಾಗುತ್ತದೆ. ಕಾನೂನು ಮೀರಿ ಒತ್ತುವರಿ ಮಾಡಿಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ತಳಮಟ್ಟದ ಅಧಿಕಾರಿಗಳಿಗೆ ಕೆಲವು ಮಾರ್ಗಸೂಚಿ ನೀಡಲಾಗಿದೆ ಎಂದರು. ಉಪವಿಭಾಗಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಮೇಲ್ವಿಚಾರಕಿ ವಿನುತಾ, ಅಕ್ಕನಾಗಮ್ಮ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News