×
Ad

ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ: ಶಾಸಕ ಅಪ್ಪಚ್ಚುರಂಜನ್ ಸಲಹೆ

Update: 2016-07-29 22:13 IST

 ಮಡಿಕೇರಿ, ಜು.29: ಸಾರ್ವಜನಿಕರ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಿಂಗಳ ಮೊದಲ ಶನಿವಾರ ತಾಲೂಕು ಮಟ್ಟದ ಜನಸಂಪರ್ಕ ಸಭೆ ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ನೀಡಿದ್ದಾರೆ. ಗಾಳಿಬೀಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಮಡಿಕೇರಿ ತಾಲೂಕು ಜನಸಂಪರ್ಕ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಗ್ರಾಮ ಪಂಚಾಯತ್‌ಗಳಲ್ಲಿ ಸಭೆ ಆಯೋಜಿಸುವಲ್ಲಿ ದಿನಾಂಕವನ್ನು ಗೊತ್ತುಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜನಸಂಪರ್ಕ ಸಭೆೆಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಜನಸಾಮಾನ್ಯರಿಗೆ ವಿವಿಧ ಇಲಾಖೆಗಳಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.

ಸಭೆೆಯಲ್ಲಿ ಅಕ್ರಮ-ಸಕ್ರಮ, 94.ಸಿ ಅರ್ಜಿ ವಿಲೇವಾರಿ, ನಮೂನೆ 1 ರಿಂದ 5 ನಮೂನೆ ಭರ್ತಿ ಮಾಡದಿರುವ ಬಗ್ಗೆ. ಕಂದಾಯ ನಿಗದಿ ಮಾಡದಿರುವ ಬಗ್ಗೆ, ಕೆ.ನಿಡುಗಗಣೆ ಗ್ರಾಮದ ರಸ್ತೆ, ಮೂಲ ಸೌಕರ್ಯ ಮತ್ತಿತರ ಕುಂದುಕೊರತೆ ಸಂಬಂಧಿಸಿದಂತೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾದವು.

94 ಸಿ ಅರ್ಜಿ ವಿಳಂಬವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು 94.ಸಿ ಅರ್ಜಿಗೆ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದಲ್ಲಿ ಖುದ್ದಾಗಿ ತಹಶೀಲ್ದಾರರಿಗೆ ಸಲ್ಲಿಸಬಹುದಾಗಿದೆ.

ಈ ಬಗ್ಗೆ ಸಾರ್ವಜನಿಕರು ಅಗತ್ಯ ಮಾಹಿತಿಗಳನ್ನು ತಾಲೂಕು ಕಚೇರಿಗಳಲ್ಲಿ ಪಡೆದುಕೊಳ್ಳಬಹುದು ಎಂದು ಶಾಸಕ ರಂಜನ್ ಹೇಳಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ ಅವರು ಸರ್ವೇ ವ್ಯಾಪ್ತಿಗೆ ಒಳಪಟ್ಟಿರುವ ಭೂಮಿಗೆ ಕಂದಾಯ ನಿಗದಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತಹಶೀಲ್ದಾರ್ ಕುಂಜಮ್ಮ, ಗಾಳಿಬೀಡು ಗ್ರಾಪಂ ಅಧ್ಯಕ್ಷರಾದ ಸುಭಾಶ್ ಸೋಮಯ್ಯ, ಕೆ.ನಿಡುಗಣೆ ಗ್ರಾಪಂ ಅಧ್ಯಕ್ಷರಾದ ರೀಟಾ ಮುತ್ತಣ್ಣ,

ಗ್ರಾಪಂ ಸದಸ್ಯರಾದ ಪ್ರದೀಪ್, ಧನಂಜಯ್, ವೃತ್ತ ನಿರೀಕ್ಷಕರಾದ ಮೇದಪ್ಪ, ಸಬ್ ಇನ್‌ಸ್ಪೆೆಕ್ಟರ್ ಕರೀಂ ರಾವುತರ್, ಉದ್ಯೋಗ ವಿನಿಮಯಾಧಿಕಾರಿ ಸಿ.ಜಗ್ಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News