×
Ad

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಧರಣಿ

Update: 2016-07-29 22:14 IST

ಕಾರವಾರ, ಜು.29: ಬ್ಯಾಕಿಂಗ್ ಕ್ಷೇತ್ರದಲ್ಲಿನ ಬದಲಾವಣೆಗೆ ಆಗ್ರಹಿಸಿ ವಿವಿಧ ಬ್ಯಾಂಕ್ ಉದ್ಯೋಗಿಗಳು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸದೇ ನಗರದ ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಧರಣಿ ನಡೆಸಿದರು. ಕೇಂದ್ರ ಸರಕಾರ ಪ್ರಸ್ತಾಪಿಸುತ್ತಿರುವ ಬ್ಯಾಂಕಿಂಗ್ ಸುಧಾರಣಾ ನೀತಿಯು ಬ್ಯಾಂಕುಗಳ ಮೇಲಿನ ಸಾರ್ವಜನಿಕರ ಒಡೆತನವನ್ನು ಖಾಸಗಿ ಹಾಗೂ ವಿದೇಶಿ ಬಂಡವಾಳ ಶಾಹಿಗಳ ಕೈಗೆ ಒಪ್ಪಿಸುವ ಹುನ್ನಾರವಾಗಿದೆ ಎಂದು ಧರಣಿ ನಿರತ ಬ್ಯಾಂಕ್ ನೌಕರರು ದೂರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್ ಮಾತನಾಡಿ, ಬ್ಯಾಕಿಂಗ್ ಕ್ಷೇತ್ರದ ಅಭಿವೃದ್ಧಿ ಮಾಡುವುದಾದಲ್ಲಿ ಮೊದಲು ಸಾವಿರಾರು ಕೋಟಿಗಳಷ್ಟು ಸಾಲ ಪಡೆದು ಸಕಾಲಕ್ಕೆ ಮರು ಪಾವತಿ ಮಾಡದ ಸ್ಥಿತಿವಂತ ಸುಸ್ತಿದಾರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು. ಅನುತ್ಪಾದಕ ಸಾಲ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು. ಇದರ ಬದಲಾಗಿ ಬಂಡವಾಳಶಾಹಿಗಳ ಕೈಗೆ ಬ್ಯಾಂಕುಗಳನ್ನು ಒಪ್ಪಿಸುವುದು ಸರಿಯಲ್ಲ. ಬ್ಯಾಂಕುಗಳ ವಿಲೀನೀಕರಣದಿಂದ ಬ್ಯಾಕಿಂಗ್ ಸೇವೆ ಜನಸಾಮಾನ್ಯರ ಪಾಲಿಗೆ ದುಬಾರಿ ಹಾಗೂ ದುರ್ಲಭವಾಗಲಿದೆ. ಖಾಸಗಿಕರಣದಿಂದ ಕೆಲಸದ ಹೊರ ಗುತ್ತಿಗೆ, ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಾದ್ಯವಿಲ್ಲ. ಸುರಕ್ಷಿತ ಸೇವೆ ಸಿಗುವುದಿಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ವಿನೋದ ಬಾಂದೇಕರ, ಪದಾಧಿಕಾರಿ ವಸಂತ ಶೆಟ್ಟಿ, ರವಿಕಾಂತ ತಳೇಕರ, ಅಶೋಕ ರಾಮದುರ್ಗ, ಪಿವಿ ರವಿಕುಮಾರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News