×
Ad

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Update: 2016-07-29 22:17 IST

ಶಿವಮೊಗ್ಗ, ಜು.29: ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವನ್ನು ವಜಾಗೊಳಿಸಬೇಕು. ಮಾಯಾವತಿ ಅವರಿಗೆ ಅವಹೇಳನ ಮಾಡಿದ ಬಿಜೆಪಿ ಮುಖಂಡನ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುಜರಾತ್‌ನ ಉನಾ ಗ್ರಾಮದಲ್ಲಿ 7 ದಲಿತರ ಮೇಲೆ ಹಲ್ಲೆ ನಡೆಸಿ, ನಗ್ನಗೊಳಿಸಿ ಮೆರವಣಿಗೆ ಮಾಡಲಾಗಿದೆ. ಗೋ ಹತ್ಯೆ ವಿರುದ್ಧ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿಕೊಂಡು ಈ ರೀತಿ ದೇಶದ ಹಲವೆಡೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪತಾಲೂಕಿನ ಶಾಂತಿಪುರದಲ್ಲಿ ಇದೇ ರೀತಿಯ ಘಟನೆಯೊಂದು ಇತ್ತೀಚೆಗೆ ಸಂಭವಿಸಿದೆ. ಬಜರಂಗದಳದವರು ಯುವಕರ ಬಟ್ಟೆ ಬಿಚ್ಚಿ ಅಮಾನವೀಯವಾಗಿ ವರ್ತಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದಲಿತರ ಮೇಲೆ ದೌರ್ಜನ್ಯ ವರದಿಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಸ್ಥಾಪಿಸಿದ ಮುದ್ರಣಾಲಯವನ್ನು ಧ್ವಂಸ ಮಾಡಲಾಗಿದೆ. ಆದರೂ ಕೇಂದ್ರ ಸರಕಾರ ವೌನ ವಹಿಸಿರುವುದು ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ಇವುಗಳಿಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು. ದಲಿತರ, ಮಹಿಳೆಯರ ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈ ಸಂದರ್ಭ ದಸಂಸ ಮುಖಂಡ ನಾಗರಾಜ್ ಅರಳಸುರಳಿ, ಭದ್ರಾವತಿಯ ಎ.ಜಿ. ರಂಗನಾಥ್, ರಾಜೇಂದ್ರ ಮೇಸ್ಟ್ರಿ, ಟಿ. ಮಂಜುನಾಥ್ ನವುಲೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News