×
Ad

ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಅರಣ್ಯ ಸಚಿವ ಬಿ.ರಮಾನಾಥ ರೈ

Update: 2016-07-29 22:18 IST

ಮೂಡಿಗೆರೆ, ಜು.29: ಒತ್ತುವರಿ ಸಮಸ್ಯೆಗೆ ಈ ಹಿಂದಿನ ಸಂಪುಟಸಭೆಯಲ್ಲಿ ನಿರ್ಧರಿಸಿದಂತೆ ತಾತ್ಕಾಲಿಕ ಪರಿ ಹಾರ ಕಂಡುಕೊಳ್ಳಲಾಗಿತ್ತು. ಒತ್ತುವರಿದಾರರಿಗೆ ಇಲಾಖೆಯಿಂದ ಯಾವುದೇ ನೋಟಿಸ್ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಪಟ್ಟಣದ ಚರ್ಚ್ ಹಾಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಎಕರೆ ಒಳಗಿನ ಒತ್ತುವರಿದಾರರರಿಗೆ ತೆರವುಗೊಳಿಸುವ ನಿಲುವಿನಿಂದ ವಿನಾಯಿತಿ ನೀಡಲಾಗಿತ್ತು. ಡೀಮ್ಡ್ ಫಾರೆಸ್ಟ್ ಭೂಮಿಯ ವ್ಯಾಜ್ಯ ಇನ್ನೂ ಬಗೆಹರಿಯದಿರುವ ಹಿನ್ನೆಲೆಯಲ್ಲಿ ಒತ್ತುವರಿದಾರರಿಗೆ ಯಾವುದೇ ನೋಟಿಸ್ ನೀಡದಂತೆ ಆದೇಶ ನೀಡಲಾಗಿದೆ ಎಂದು ಹೇಳಿದರು. ಬೇರೆ ರಾಜ್ಯಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಹುಲಿ, ಚಿರತೆ ಹಾವಳಿ ಕಡಿಮೆ ಪ್ರಮಾಣದಲ್ಲಿದೆ. ಅರಣ್ಯ ಸುರಕ್ಷಾ ಕಾಯ್ದೆ ಸದ್ಯದಲ್ಲಿಯೆ ಜಾರಿಗೆ ಬರಲಿದ್ದು, ನಂತರ ಆನೆ ಕಾರಿಡಾರ್ ಸೇರಿದಂತೆ ಇತರ ಪ್ರಾಣಿಗಳಿಗೂ ಕಾರಿಡಾರ್ ನಿರ್ಮಿಸಿ ನಾಡಿಗೆ ಬರದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದರು.

ರೈತರ ಜಮೀನುಗಳಿಗೆ ಕಾಡುಪ್ರಾಣಿಗಳು ನುಗ್ಗದಂತೆ ಐಬೆಕ್ಸ್ ವಿದ್ಯುತ್ ಬೇಲಿ ನಿರ್ಮಿಸಲು ಶೇ.50ರಷ್ಟು ಸಹಾಯಧನ ನೀಡಲಾಗುವುದು. ಮೀಸಲು ಅರಣ್ಯ ಪ್ರದೇಶಗಳಲ್ಲಿ ಇಲಾಖೆಯಿಂದಲೇ ಐಬೆಕ್ಸ್ ವಿದ್ಯುತ್ ಬೇಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಿಚಾರವನ್ನು ರೈತರೊಬ್ಬರು ಪತ್ರಿಕಾಗೋಷ್ಠಿ ಸ್ಥಳದಲ್ಲೆ ಸಚಿವರ ಗಮನಕ್ಕೆ ತಂದಾಗ, ಅಧಿಕಾರಿಯೊಬ್ಬರನ್ನು ನೇಮಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಡಿಎಫ್‌ಒಗೆ ಸೂಚಿಸಿದರು. ಗೋಷ್ಠಿಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ.ಮೋಟಮ್ಮ, ಎಂ.ಕೆ.ಪ್ರಾಣೇಶ್, ತಾಪಂ ಅಧ್ಯಕ್ಷ ಕೆ.ಸಿ.ರತನ್, ಅರಣ್ಯ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಹೊಸಮಠ್, ನಾಗರಾಜ್, ಸಿ.ಜಯರಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News