ಬ್ಯಾಂಕಿಂಗ್ ವ್ಯವಸ್ಥೆಯ ವಿರೋಧಿ ನೀತಿ ಖಂಡಿಸಿ ಧರಣಿ
ದಾವಣಗೆರೆ, ಜು.29: ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಸರಕಾರದಿಂದಲೇ ನಡೆಯುತ್ತಿದೆ. ಹಲವಾರು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತಂದು ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದಾರೆ. ನಗರದ ಮಂಡಿಪೇಟೆಯ ಕೆನರಾ ಬ್ಯಾಂಕ್‌ನ ಮುಖ್ಯ ಶಾಖೆ ಆವರಣದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಹಾಗೂ 9 ಸಂಘಟನೆಗಳ ನೌಕರರು ಮತ್ತು ಅಧಿಕಾ ರಿಗಳ ಸಮೂಹದಿಂದ ಜಿಲ್ಲೆಯಲ್ಲಿ ಸುಮಾರು 200 ಬ್ಯಾಂಕ್ ಶಾಖೆಗಳ ಬ್ಯಾಂಕಿಂಗ್ ಚಟುವಟಿಕೆ ಸ್ತಬ್ಧಗೊಳಿಸಿ ಕೇಂದ್ರ ಸರಕಾ ರದ ರಾಷ್ಟ್ರೀಕರಣ ವಿರೋಧಿ ನೀತಿ ಖಂಡಿಸಿ ಮತ ಪ್ರದರ್ಶನ ನಡೆಸಿದರು. ಯುಎಫ್‌ಬಿಯುನ ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು, ವಿದೇಶಿ ಬಂಡವಾಳ ಶಾಹಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಅನುವು ಮಾಡಿಕೊಡುವುದು, ಸರಕಾರಿ ಬ್ಯಾಂಕುಗಳಲ್ಲಿ ಸರಕಾರಿ ಬಂಡ ವಾಳ ಕಡಿತಗೊಳಿಸಿ ಖಾಸಗಿ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡುವುದು ಮುಖ್ಯ ಉದ್ದೇಶವಾಗಿದೆ ಎಂದರು. ಪ್ರತಿಯೊಬ್ಬ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯ ಸಿಗಬೇಕು. ಕೇವಲ ಉಳ್ಳವರಿಗೆ ಮಾತ್ರ ಬ್ಯಾಂಕಿಂಗ್ ಸೌಲಭ್ಯ ಸಿಗಬಾರದು ಎನ್ನುವ ಮಹತ್ತರವಾದ ಉದ್ದೇಶದೊಂದಿಗೆ 1969ರಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಯಿತು. 1969ರ ರಾಷ್ಟ್ರೀಕರಣದ ನಂತರ ಅವಧಿಯಲ್ಲಿ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಬೃಹದಾಕಾರವಾಗಿ ಬೆಳೆಯಿತು. ಲಕ್ಷಾಂತರ ಉದ್ಯೋಗ ಸೃಷ್ಟಿಯಾಯಿತು. ಸಾವಿರಾರು ಬ್ಯಾಂಕ್ ಶಾಖೆಗಳು ಆರಂಭಗೊಂಡಿವೆ ಎಂದು ಮಾಹಿತಿ ನೀಡಿದರು. ಸರಕಾರವು ಮಧ್ಯಪ್ರವೇಶಿಸಿ ನಮ್ಮೆಲ್ಲಾ ನ್ಯಾಯಯುತವಾದ ಬೇಡಿಕೆ ಪರಿಶೀಲಿಸಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿಂಗ್ ಕ್ಷೇತ್ರ ಇನ್ನಷ್ಟು ಶಕ್ತಿಯುತಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟದ ಚಳವಳಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಸಂದರ್ಭ ಮುಷ್ಕರದಲ್ಲಿ ಅಜಿತ್ ಕುಮಾರ್, ಎಚ್. ನಾಗರಾಜ್, ಎಂ.ವಿ. ವೆಂಕಟೇಶ್, ವಿ.ಶಂಭುಲಿಂಗಪ್ಪ, ಡಿ.ಕೆ. ಸರೋಜಾ, ದತ್ತಾತ್ರೇಯ ಮೇಲಗಿರಿ, ಸುನೀಲ್ ಮ್ಯಾಗೇರಿ, ವಿಶ್ವನಾಥ್ ಬಿಲ್ಲವ, ಪಲ್ಲವಿ, ಬಾನುಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.