×
Ad

ಇಬ್ಬರು ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಿಇಒ ಸೂಚನೆ

Update: 2016-07-29 22:21 IST

ಶಿವಮೊಗ್ಗ, ಜು. 29: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ಎಂಎನ್‌ಆರ್‌ಇಜಿ) ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿ ಯೊಂದರಲ್ಲಿ ಅಳತೆಯಲ್ಲಿ ಲೋಪ ಎಸಗಿದ ಆರೋಪದ ಮೇರೆಗೆ ಇಬ್ಬರು ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲು ಸೂಚನೆ ನೀಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಸದಸ್ಯರಿಗೆ ಏರ್ಪಡಿಸಿದ್ದ ವಿವಿಧ ಇಲಾಖೆ ಗಳಡಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಕಾರ್ಯಾಗಾರದಲ್ಲಿ ಎನ್‌ಆರ್‌ಇಜಿ. ಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎನ್‌ಆರ್‌ಇಜಿ. ಯೋಜನೆಯಡಿ ಲೋಪ ಎಸಗುವ ಅಧಿಕಾರಿ-ಸಿಬ್ಬಂದಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುತ್ತಿದೆ. ಅಕ್ರಮ ಎಸಗಿದವರನ್ನು ಅಮಾನತುಗೊಳಿಸುವುದರ ಜೊತೆಗೆ ಭಡ್ತಿಗೆ ತಡೆ, ಕ್ರಿಮಿನಲ್ ಕೇಸ್ ದಾಖಲು, ಇಲಾಖಾ ತನಿಖೆ ಸೇರಿದಂತೆ ಎಲ್ಲ ರೀತಿಯ ಕಾನೂನಾತ್ಮಕ ಕ್ರಮಗಳನ್ನು ಜರಗಿಸಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ದುರ್ಬಳಕೆಯಾದ ಮೊತ್ತ ವಸೂಲಿಗೂ ಆದೇಶ ನೀಡಲಾಗಿದೆ ಎಂದು ತಿಳಿಸಿದರು. ತಾವು ಕೂಡ ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಎನ್‌ಆರ್‌ಇಜಿ ಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದೇನೆ. ನಿಯಮಾನುಸಾರ ಯೋಜನೆಯಡಿ ಕೆಲಸ ಕಾರ್ಯ ನಡೆಸುವಂತೆ ಗ್ರಾಪಂ ಪಿಡಿಒ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಾಲಕಾಲಕ್ಕೆ ನಿರ್ದೇ ಶನ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ವಿವರ: ಜಿಪಂನ ಯೋಜನಾ ನಿರ್ದೇಶಕರಾದ ರವಿಕುಮಾರ್‌ರವರು ಮಾತನಾಡಿ, ಯೋಜನೆ ಯಡಿ ಕೆಲಸಕ್ಕೆ ಆಗಮಿಸುವ ಪುರುಷ-ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ನಿಗದಿ ಮಾಡಲಾಗಿದೆ. ಒಟ್ಟಾರೆ 234 ರೂ. ಕೂಲಿ ಕೊಡಲಾಗುತ್ತಿದೆ. ಜಾಬ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಗ್ರಾಮಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗುತ್ತಿದೆ ಎಂದು ಯೋಜನೆಯ ಸಮಗ್ರ ಮಾಹಿತಿ ನೀಡಿದರು. ಲೋಪವಾಗಿದೆ: ಈ ವೇಳೆ ಸದಸ್ಯ ಕಾಗೋಡು ಅಣ್ಣಪ್ಪರವರು ಮಾತನಾಡಿ, ಸಾಗರ ತಾಲೂಕಿನ ಗ್ರಾಪಂ ವ್ಯಾಪ್ತಿಯೊಂದರಲ್ಲಿ ಎನ್‌ಆರ್‌ಇಜಿಯ ಅನುಷ್ಠಾನದಲ್ಲಿ ಅಕ್ರಮವಾಗಿದೆ. ಬೋಗಸ್ ಜಾಬ್ ಕಾರ್ಡ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಗೋಬರ್‌ಗ್ಯಾಸ್: ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್‌ರವರು ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಗೋಬರ್ ಗ್ಯಾಸ್ ಘಟಕಗಳ ನಿರ್ಮಾಣವನ್ನು ಗ್ರಾಪಂಗಳ ಮೂಲಕವೇ ಅನುಷ್ಠಾನ ಮಾಡಲಾಗುವುದು. ಪ್ರಸ್ತುತ ವರ್ಷ ಜಿಲ್ಲೆಗೆ 200 ಘಟಕ ನಿರ್ಮಾಣದ ಗುರಿ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News