×
Ad

ನೀರಿನಲ್ಲಿ ಕೊಚ್ಚಿ ಹೋದ ಮಗು

Update: 2016-07-29 22:23 IST

ಕುಶಾಲನಗರ,ಜು.29: ಅಣೆಕಟ್ಟಿನ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮುನ್ನೆಚ್ಚರಿಕೆ ನೀಡದೆ ಹಾರಂಗಿ ಜಲಾಶಯದಿಂದ ನಾಲೆಗಳಿಗೆ ನೀರನ್ನು ಹರಿಸಿದ ಪರಿಣಾಮವಾಗಿ ನಾಲೆಯ ಅಂಚಿನಲ್ಲಿ ಕುಳಿತಿದ್ದ ಮಗು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಹಾರಂಗಿಯ ಫಾರಂ ಬಳಿ ನಡೆದಿದೆ. ಕೂಡಿಗೆ ಗ್ರಾಪಂ ವ್ಯಾಪ್ತಿಯ ಸೀಗೆ ಹೊಸೂರು ಸಮೀಪದ ಮಾವಿನಹಳ್ಳ ಗ್ರಾಮದ ನಿವಾಸಿ ಕೈಬಲ್ಲಿರ ಭರತ್ ಮತ್ತು ಧರಣಿರವರ ಪುತ್ರ ಶಶಾಂಕ್(5) ಮೃತ ಬಾಲಕ. ಕೂಡಿಗೆಯ ಕಿಶೋರ ಕೇಂದ್ರದಲ್ಲಿ ಓದುತ್ತಿದ್ದ ಈ ಬಾಲಕ ಶಾಲೆಯಿಂದ ಅಜ್ಜಿಯ ಮನೆಗೆ ಬಂದಾಗ, ಅಜ್ಜಿ ಹಾರಂಗಿ ಎಡದಂಡೆ ನಾಲೆಯ ಬಳಿ ಬಟ್ಟೆ ತೊಳೆಯಲು ಹೋಗುವಾಗ, ಮೊಮ್ಮಗನನ್ನು ಕರೆದೊಯ್ದು ಕಾಲುವೆಯ ಮೆಟ್ಟಿಲ ಮೇಲೆ ಕೂರಿಸಿದ್ದಾಳೆ. ಈ ಸಂದರ್ಭ ಇದ್ದಕ್ಕಿದ್ದಂತೆಯೇ ನಾಲೆಯಲ್ಲಿ ನೀರು ಹರಿದು ಬಂದ ಕಾರಣ ಕೆಳಭಾಗದಲ್ಲಿ ಕುಳಿತಿದ್ದ ಮೊಮ್ಮಗ ಶಶಾಂಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ತಕ್ಷಣ ಅಜ್ಜಿ ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿ ಜಲಾಶಯದ ಅಧಿಕಾರಿಗಳಿಗೆ ಕಾಲುವೆಯ ನೀರು ನಿಲ್ಲಿಸುವಂತೆ ಕೋರಿದ್ದಾರೆ. ಆ ವೇಳೆಗಾಗಲೇ ಸುಮಾರು 300 ಮೀಟರ್‌ಗಳಷ್ಟು ದೂರ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕನನ್ನು ಮೇಲೆತ್ತಿದಾಗ ಮೃತಪಟ್ಟಿದ್ದ. ರಾತ್ರಿ 9:30 ವೇಳೆಗೆ ಕಳೆಬರಹವನ್ನು ಕುಶಾಲನಗರ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಜಿಪಂ ಮಾಜಿ ಅಧ್ಯಕ್ಷ ರಾಜಾರಾವ್, ಗ್ರಾಪಂ ಸದಸ್ಯ ಭಾಸ್ಕರ್ ನಾಯಕ್ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಅಧಿಕಾರಿಗಳ ಮೇಲೆ ಪೋಷಕರು ಮತ್ತು ಸ್ಥಳೀಯರ ಆಕ್ರೋಶ:

  ಇಂದು ಬೆಳಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಜೆ.ಇ.ಮಹೇಶ್ ಸಂಬಂಧಪಟ್ಟ ನೀರಾವರಿ ಇಲಾಖೆಯ ಇಂಜಿನಿಯರ್‌ಗಳಾದ ಧರ್ಮರಾಜ್ ಮತ್ತು ನಾಗರಾಜ್ ಅವರನ್ನು ಠಾಣೆಗೆ ಕರೆಸಿ ಮೃತ ಬಾಲಕನ ಪೋಷಕರು ಮತ್ತು ಸ್ಥಳೀಯ ಮುಖಂಡರ ಸಮಕ್ಷಮದಲ್ಲಿ ಸಭೆ ನಡೆಸಿದರು. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ಸಂಭವಿಸಿದೆ. ತಕ್ಷಣ ಇವರ ಮೇಲೆ ಎಫ್‌ಐಆರ್ ದಾಖಲಿಸಿ, ಪರಿಹಾರ ಕೊಡಿಸಬೇಕೆಂದು ಮೃತನ ಪೋಷಕರು ಮತ್ತು ಸ್ಥಳೀಯರು ಒತ್ತಾಯಿಸಿದರು. ಆ ವೇಳೆಗೆ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಟಿ.ಕುಮಾರ್, ಆಕ್ರೋಶಗೊಂಡಿದ್ದ ಪೋಷಕರು ಹಾಗೂ ಸ್ಥಳೀಯರನ್ನು ಸಮಾಧಾನಿಸಿ, ಈಗ ಸಧ್ಯಕ್ಕೆ ಮೃತನ ಕಳೆಬರಹದ ಶವಪರೀಕ್ಷೆ ನಡೆಯಲು ಅವಕಾಶ ಕೊಡಿ. ನಂತರ ಅಧಿಕಾರಿಗಳ ಮೇಲೆ ಪ್ರಕರಣವನ್ನು ದಾಖಲಿಸಿ, ಅವರ ಮೇಲಧಿಕಾರಿಗಳ ಗಮನಕ್ಕೆ ತಂದು ಮೃತನ ಕುಟುಂಬದವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News