ಮಹಾದಾಯಿಗಾಗಿ ಬೀದಿಗಿಳಿದ ಸ್ಯಾಂಡಲ್‌ವುಡ್
ಬೆಂಗಳೂರು, ಜು.30: ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪನ್ನು ವಿರೋಧಿಸಿ ನೀಡಲಾಗಿರುವ ಕರ್ನಾಟಕ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಕನ್ನಡ ಪರ ಸಂಘಟನೆಗಳಿಂದ ಬೆಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ, ರ‍್ಯಾಲಿ ನಡೆಯುತ್ತಿದೆ.
ವಾಟಾಲ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ನ ತನಕ ಮೆರವಣಿಗೆಯಲ್ಲಿ ಸಾಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನ ರ‍್ಯಾಲಿಯಲ್ಲಿ ಪಾಲ್ಗೊಂಡಿವೆ.
ಮಹಾದಾಯಿ ನ್ಯಾಯಮಂಡಳಿಯ ಅನ್ಯಾಯವನ್ನು ಪ್ರತಿಭಟಿಸಿ ಕನ್ನಡ ಚಿತ್ರರಂಗದ ದಿಗ್ಗಜರು ಬೀದಿಗಿಳಿದಿದ್ದಾರೆ.ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ಚಿತ್ರರಂಗದ ರ‍್ಯಾಲಿಯಲ್ಲಿ ನಟರಾದ ಡಾ.ಶಿವರಾಜ್‌ಕುಮಾರ‍್, ಚಿರಂಜೀವ ಸರ್ಜಾ, ಯಶ್, ರಂಗಾಯಣ ರಘು, ಗೋಲ್ಡನ್ ಸ್ಟಾರ‍್ ಗಣೇಶ್, ಶ್ರುತಿ, ಹೇಮಾ ಚೌಧರಿ, ಬಿ.ಸಿ.ಪಾಟೀಲ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸುರಿಯುತ್ತಿರುವ ಮಳೆಯ ನಡುವೆಯೂ ಚಿತ್ರ ತಾರೆಯರು ರ‍್ಯಾಲಿ ನಡೆಸಿದರು.
ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿರುವ ವಾಟಾಳ್ ನಾಗರಾಜ್ ಅವರು ನೇತೃತ್ವ ವಹಿಸಿರುವ ಕನ್ನಡಪರ ಸಂಘಟನೆಗಳು ಸಂಸದರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ.