ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ನಿಧನ

Update: 2016-07-30 13:12 GMT

ಬೆಂಗಳೂರು, ಜು.30: ಮೇದೋಜ್ಜಿರಕ ಗ್ರಂಥಿ(ಪ್ಯಾನ್‌ಕ್ರಿಯಾಟಿಕ್) ಸಮಸ್ಯೆಯಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ(39) ಚಿಕಿತ್ಸೆ ಫಲಕಾರಿಯಾಗದೆ ಬೆಲ್ಜಿಯಂ ದೇಶದ ಬ್ರಸೇಲ್ಸ್ ನಗರದ ಆ್ಯಂಟ್‌ವರ್ಪ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸ್ನೇಹಿತರೊಂದಿಗೆ ಜು.22ರಂದು ವಿದೇಶ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ರಾಕೇಶ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಜು.24ರಂದು ಯೂನಿವರ್ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರಿಂದ ಸತತ ಒಂದು ವಾರಗಳ ಕಾಲ ಚಿಕಿತ್ಸೆ ನೀಡಲಾಗಿತ್ತಾದರೂ ಪ್ರಯೋಜನವಾಗಲಿಲ್ಲ.
ರಾಕೇಶ್ ಆರೋಗ್ಯ ಚಿಂತಾಜನಕವಾಗಿರುವ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಹಾಗೂ ಕುಟುಂಬ ಸದಸ್ಯರು ಜು.28ರಂದು ಬೆಲ್ಜಿಯಂಗೆ ತೆರಳಿದರು. ಅಲ್ಲದೆ, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಸಂಪರ್ಕಿಸಿ, ತಮ್ಮ ಮಗನ ಚಿಕಿತ್ಸೆಗೆ ಅಗತ್ಯ ನೆರವು ಒದಗಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದರು.

ಮುಖ್ಯಮಂತ್ರಿ ಮನವಿಯ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಬೆಲ್ಜಿಯಂನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಸಂಪರ್ಕಿಸಿ, ರಾಕೇಶ್ ಅವರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಲು ಬೇಕಾದ ಎಲ್ಲ ರೀತಿಯ ನೆರವನ್ನು ಒದಗಿಸುವಂತೆ ಸೂಚನೆ ನೀಡಿದ್ದರು. ರಾಕೇಶ್‌ರಿಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ತಂಡವನ್ನು ಸಿದ್ದರಾಮಯ್ಯ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಮೂರು ತಿಂಗಳ ಹಿಂದೆ ಮೈಸೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ರಾಕೇಶ್ ಚಿಕಿತ್ಸೆ ಪಡೆದಿದ್ದರು. ಬೆಲ್ಜಿಯಂಗೆ ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಂಡಿತ್ತು. ಸೋಂಕು ಉಲ್ಬಣಗೊಂಡಿದ್ದು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
 
  
 ಬೆಲ್ಜಿಯಂ ದೇಶದಿಂದ ರಾಕೇಶ್ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ರವಿವಾರ ಸಂಜೆ ಬೆಂಗಳೂರಿಗೆ ತರುವ ಸಾಧ್ಯತೆಯಿದೆ. ರಾಕೇಶ್ ಅವರು ಪತ್ನಿ ಸ್ಮಿತಾ, ಪುತ್ರ, ಪುತ್ರಿ, ಕಿರಿಯ ಸಹೋದರ ಡಾ.ಯತ್ರೀಂದ್ರ, ತಂದೆ-ತಾಯಿ ಒಳಗೊಂಡಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇದೇ ತಿಂಗಳ 13ರಂದು ತಮ್ಮ 39ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ರಾಕೇಶ್, ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ತಂದೆಯ ಹೆಸರಿಗೆ ಎಂದು ಕಳಂಕ ತರುವುದಿಲ್ಲ ಎಂಬ ಮಾತುಗಳನ್ನಾಡಿದ್ದರಲ್ಲದೆ, ತಮ್ಮ ತಂದೆ ರಾಜಕಾರಣದಿಂದ ನಿವೃತ್ತಿಯಾಗುವವರೆಗೂ ತಾವು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ ಎಂದು ರಾಕೇಶ್ ತಿಳಿಸಿದ್ದನ್ನು ಸ್ಮರಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಉತ್ತರಾಧಿಕಾರಿಯಾಗಿ ಗುರುತಿಸಲ್ಪಟ್ಟಿದ್ದ ರಾಕೇಶ್, ಮುಖ್ಯಮಂತ್ರಿ ಪ್ರತಿನಿಧಿಸುವ ವರುಣಾ ಕ್ಷೇತ್ರದ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಅಲ್ಲದೆ, ಚುನಾವಣೆ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಕ್ಷೇತ್ರಾದ್ಯಂತ ಪ್ರಚಾರ ಸೇರಿದಂತೆ ಎಲ್ಲ ಕೆಲಸವನ್ನು ನಿರ್ವಹಿಸುತ್ತಿದ್ದರು.

ಸಿಎಂಗೆ ದುಃಖದಿಂದ ಹೊರಬರುವ ಶಕ್ತಿ ಸಿಗಲಿ
ಯುವಕನಾಗಿದ್ದ ರಾಕೇಶ್ ನಿಧನದ ಸುದ್ದಿ ಆಘಾತಕಾರಿಯಾದದ್ದು. ವೈಯಕ್ತಿಕವಾಗಿ ನನಗೆ ರಾಕೇಶ್ ಪರಿಚಯವಿಲ್ಲದಿದ್ದರೂ, ಮೈಸೂರು ಜಿಲ್ಲೆಯಲ್ಲಿ ಅವರು ಜನಸಾಮಾನ್ಯರೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು ಎಂಬುದನ್ನು ಕೇಳಿದ್ದೇನೆ. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ರಾಕೇಶ್‌ರನ್ನು ಬೆಳೆಸಲು ಬಯಸಿದ್ದರು. ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವರು ಬೆಲ್ಜಿಯಂನ ಆಸ್ಪತ್ರೆಯಲ್ಲಿ ಅವರಿಗೆ ಗುಣಮಟ್ಟದ ಚಿಕಿತ್ಸೆಕೊಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಈ ದುಃಖದಿಂದ ಹೊರಬರುವ ಶಕ್ತಿಯನ್ನು ಭಗವಂತ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರಿಗೆ ಕರುಣಿಸಲಿ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ದುಃಖದ ಸಂಗತಿ
ಮುಖ್ಯಮಂತ್ರಿಯ ಮಗನ ಸಾವು ದುಃಖದ ಸಂಗತಿ. ನಿನ್ನೆಯಷ್ಟೆ ಸಿದ್ದರಾಮಯ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಿದ್ದೆ. ಆದರೆ, ಕೇವಲ ಒಂದೇ ದಿನದಲ್ಲಿ ಅವರು ಮೃತಪಟ್ಟಿರುವುದನ್ನು ಕೇಳಿ ದುಃಖವಾಗುತ್ತಿದೆ. ರಾಕೇಶ್‌ಗೆ ಮುಂದಿನ ದಿನಗಳಲ್ಲಿ ಯುವ ನಾಯಕನಾಗಿ ಬೆಳೆಯುವ ಸಾಕಷ್ಟು ಅವಕಾಶಗಳಿದ್ದವು. ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರದ ಎಲ್ಲ ಕೆಲಸಗಳನ್ನು ಅವರೇ ನೋಡಿಕೊಳ್ಳುತ್ತಿದ್ದರು. ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಅವರು ಮೃತಪಟ್ಟಿರುವುದು ದುಃಖಕರ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.
-ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ

ನಾನು-ಸಿಎಂ ಸಮಾನ ದುಃಖಿಗಳು
 ತಂದೆಯೊಬ್ಬ ತನ್ನ ಮಗನನ್ನು ಕಳೆದುಕೊಳ್ಳುವ ನೋವು ಏನು ಎಂಬುದು ತನಗೆ ಗೊತ್ತಿದೆ. ಈ ವಿಚಾರದಲ್ಲಿ ನಾನು ಹಾಗೂ ಸಿದ್ದರಾಮಯ್ಯ ಸಮಾನ ದುಃಖಿಗಳು. ಅದರಲ್ಲೂ, ಮುಖ್ಯಮಂತ್ರಿ ಸ್ಥಾನದಲ್ಲಿರುವವರು ರಾಜ್ಯದ ಕರ್ತವ್ಯ ನಿರ್ವಹಣೆ ಮಾಡುವವರಿಗೆ ಇಂತಹ ನೋವು ಬರಬಾರದಿತ್ತು. ಮುಖ್ಯಮಂತ್ರಿಗೆ ಈ ದುಃಖದಿಂದ ಹೊರ ಬರುವ ಶಕ್ತಿಯನ್ನು ಭಗವಂತ ನೀಡಲಿ, ರಾಜ್ಯದ ಜನರಲ್ಲಿ ಅವರು ರಾಕೇಶ್ ಮುಖವನ್ನು ಕಾಣಲಿ. ರಾಜ್ಯದ ಹಿತಾಸಕ್ತಿಗಾಗಿ ಮಗನ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಅವರಿಗೆ ಸಿಗಲಿ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

‘ನನಗೆ ನೀನು, ನಿನಗೆ ನಾನು’ ಎಂಬ ಕನ್ನಡ ಸಿನಿಮಾದಲ್ಲಿಯೂ ರಾಕೇಶ್ ಸಿದ್ದರಾಮಯ್ಯ ನಟಿಸಿದ್ದರು.

ಪ್ರಧಾನಿ ಸೂಚನೆ
ರಾಕೇಶ್ ಸಿದ್ದರಾಮಯ್ಯನವರ ಪಾರ್ಥಿವ ಶರೀರ, ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಸಹಿತವಾಗಿ ಬೆಂಗಳೂರಿಗೆ ಮರಳಲು ಅಗತ್ಯವಿರುವ ನೆರವು ನೀಡುವಂತೆ ಬೆಲ್ಜಿಯಂ ರಾಯಭಾರಿ ಮನ್‌ಜೀವ್‌ಪುರಿಗೆ ಪ್ರಧಾನಿ ನರೇಂದ್ರಮೋದಿ ಕಚೇರಿ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News