ವಿವಿಧೆಡೆ ಸಂಘಟನೆಗಳಿಂದ ಪ್ರತಿಭಟನೆ-ಮನವಿ
ತೀರ್ಪು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ: ನೆಂಪೆದೇವರಾಜ್
ತೀರ್ಥಹಳ್ಳ್ಳಿ,ಜು.30: ಪಟ್ಟಣದ ನಾಗರಿಕ ವೇದಿಕೆ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಹಾದಾಯಿ ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಹೋರಾಟಗಾರರು, ಮುಖಂಡರು ತಾಲೂಕು ಕಚೆೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದರು.
ಹೋರಾಟಗಾರ ನೆಂಪೆದೇವರಾಜ್ ಮಾತನಾಡಿ, ಕರ್ನಾಟಕದ ಮೂರು ಜಿಲ್ಲೆ ಹಾಗೂ ಹಲವಾರು ತಾಲೂಕುಗಳಿಗೆ ನೀರೊದಗಿಸುವ ಕಳಸಾ-ಬಂಡೂರಿ ಯೋಜನೆ ನ್ಯಾಯ ಮಂಡಳಿಯ ಮಧ್ಯಾಂತರ ತೀರ್ಪು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ. ಈ ಸಂಬಂಧ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಪರಿಹಾರ ಸೂಚಿಸಬೇಕು. ಇದು ನಾಗರಿಕ ಸರಕಾರದ ಕರ್ತವ್ಯವಾಗಿದೆ. ಮರಣ ಶಾಸನವಾಗಿರುವ ಈ ನ್ಯಾಯಾಧಿಕರಣದ ತೀರ್ಪನ್ನು ತೀರ್ಥಹಳ್ಳಿಯ ಪ್ರತಿಯೊಬ್ಬ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸುತ್ತೇವೆ ಎಂದು ಖಂಡಿಸಿದರು.
ಚಿಂತಕ, ಸಾಹಿತಿ ಜೆ.ಕೆ. ರಮೇಶ್ ಮಾತನಾಡಿ, ಗೋವಾ ಸರಕಾರದ ಹಠಮಾರಿ ಧೋರಣೆಗೆ ನಾವೆಲ್ಲ ಒಕ್ಕೊರಲಿನಿಂದ ಖಂಡಿಸುವುದು ಕನ್ನಡಿಗರ ಕರ್ತವ್ಯವಾಗಿದೆ. ದೇಶದ ಎಲ್ಲ ನದಿಗಳ ನೀರನ್ನು ಬಳಸುವಂತಹ ಹಕ್ಕು ಎಲ್ಲ ನಾಗರಿಕರಿಗೂ ಇದೆ. ನೆಲ,ಜಲ, ವಿಚಾರ ಬಂದಾಗ ಕನ್ನಡಿಗರಾದ ನಾವುಗಳು ಸ್ವಾಭಿಮಾನದಿಂದ ಹೋರಾಟ ಮಾಡಬೇಕಾಗಿದೆ. ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಕನ್ನಡಿಗರಾದ ಅನ್ಯಾಯವನ್ನು ಇಚ್ಛಾಶಕ್ತಿಯೊಂದಿಗೆ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಪಿ.ಸಿ.ಸತೀಶ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಹೆಗ್ಡೆ, ತಾ. ಅಧ್ಯಕ್ಷ ಸುರೇಂದ್ರ, ಹರ್ಷೇಂದ್ರಕುಮಾರ್, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ , ಪಪಂ. ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರಹ್ಮತ್ತುಲ್ಲ ಅಸಾದಿ, ಕಸಾಪ ಅಧ್ಯಕ್ಷ ಆಡಿನಸರ ಸತೀಶ್, ಮಹಿಳಾ ಮುಖಂಡರಾದ ಡಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಶಿಕಾರಿಪುರದಲ್ಲಿ ನೀರಸ ಪ್ರತಿಕ್ರಿಯೆ ಜು.30: ಕಳಸಾ ಬಂಡೂರಿ ಮಹಾದಾಯಿ ನದಿ ನೀರಿನ ಹಂಚಿಕೆಯ ನ್ಯಾಯಾಧಿಕರಣದ ಮಧ್ಯಾಂತರ ತೀರ್ಪು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ನೀಡಿರುವ ರಾಜ್ಯ ಬಂದ್ ಕರೆಗೆ ಶಿಕಾರಿಪುರದಲ್ಲಿ ಶನಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಶಿಕಾರಿಪುರದ ವಿವಿಧ ಕನ್ನಡಪರ ಸಂಘಟನೆಗಳು ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರಕಾರ ಹಾಗೂ ಸಂಸದರ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರದಲ್ಲಿ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಪುರಸಭಾ ಸದಸ್ಯ ಹಾಗೂ ಕರವೇ ಅಧ್ಯಕ್ಷರಾಗಿರುವ ಎಲ್ಲಪ್ಪ ಮಾತನಾಡಿ, ಮಹಾದಾಯಿ ನದಿಯ ಉಗಮ ಸ್ಥಾನ ಕರ್ನಾಟಕವಾಗಿದ್ದು, ನದಿಯ ನೀರು ರಾಜ್ಯದ ಜನತೆಗೆ ಕುಡಿಯಲು ಸಾಧ್ಯವಾಗದಿರುವುದು ಜನಪ್ರತಿನಿಧಿಗಳ ಘೋರ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದರು. ಕನ್ನಡ ನಾಡಿನ ನದಿ ನೀರನ್ನು ಕಬಳಿಸಲು ಯತ್ನಿಸುತ್ತಿರುವ ಗೋವಾ ರಾಜ್ಯಕ್ಕೆ ಸೂಕ್ತ ಉತ್ತರ ನೀಡಲು ನಾಡಿನ ಜನತೆ ಶಕ್ತರಾಗಿದ್ದಾರೆ.ಕನ್ನಡಿಗರ ನ್ಯಾಯಯುತ ಹೋರಾಟಕ್ಕೆ ನ್ಯಾಯ ದೊರಕಿಸುವಲ್ಲಿ ನ್ಯಾಯಾಧಿಕರಣದ ತೀರ್ಪು ವಿರುದ್ಧವಾಗಿರುವುದು ಸಂಸದರು, ಜನಪ್ರತಿನಿಧಿಗಳಿಗೆ ಅಪಮಾನಕರ ಸಂಗತಿಯಾಗಿದೆ ಎಂದರು.
ಈ ಕೂಡಲೇ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ನ್ಯಾಯಾಧಿಕರಣ ತೀರ್ಪನ್ನು ತಡೆಹಿಡಿದು ರಾಜ್ಯಕ್ಕೆ ದೊರೆಯಬೇಕಾದ ನೀರನ್ನು ದೊರಕಿಸುವ ಮೂಲಕ ಸಮಸ್ಯೆಯ ಇತ್ಯರ್ಥಕ್ಕೆ ಪ್ರಯತ್ನಿಸುವಂತೆ ಆಗ್ರಹಿಸಿದರು.
ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಕೃಷ್ಣ ಹುಲಗಿ ಮಾತನಾಡಿ, ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕೀಯ ನಂತರದಲ್ಲಿ ನಾಡು ನುಡಿಯ ಬಗ್ಗೆ ಜನಪ್ರತಿನಿಧಿಗಳು ಕಾಳಜಿಯನ್ನು ತೋರಬೇಕಾಗಿದೆ ಎಂದ ಅವರು, ನ್ಯಾಯಾಧಿಕರಣಕ್ಕೆ ಮಾಹಿತಿ ರಹಿತವಾದ ಅರ್ಜಿ,ನುರಿತ ನ್ಯಾಯಾವಾದಿಗಳ ಕೊರತೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ತೀರ್ಪಿನಿಂದ ಅನ್ಯಾಯವಾಗಿರುವ ರಾಜ್ಯದ ಹಿತ ಕಾಪಾಡಲು ಅಸಾಧ್ಯವಾದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳುವ ಸಾಧ್ಯತೆಯಿದ್ದು ಕೂಡಲೇ ನೀರಿನ ಸಮಸ್ಯೆ ಪರಿಹಾರಕ್ಕೆ ಇಚ್ಛಾಶಕ್ತಿಯನ್ನು ಸರಕಾರ ಪ್ರದರ್ಶಿಸಬೇಕಾಗಿದೆ ಎಂದರು.
ನಂತರದಲ್ಲಿ ನ್ಯಾಯಾಧಿಕರಣದ ತೀರ್ಪನ್ನು ಖಂಡಿಸಿ ನ್ಯಾಯಯುತ ತೀರ್ಪಿನ ಮೂಲಕ ರಾಜ್ಯದ ಜನತೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ, ಸಂದೀಪ ಗೋಣಿ, ಮಾಜಿ ಅಧ್ಯಕ್ಷ ಸ.ನ ಮಂಜಪ್ಪ, ಗುಡ್ಡಳ್ಳಿ ಶಿವಮೂರ್ತಿ, ಬೆಣ್ಣೆ ದೇವೇಂದ್ರಪ್ಪ, ಶಿವಕುಮಾರ ಕೋರಿ, ಶಿವರಾಜ, ನಜೀರ್‌ಸಾಬ್, ಹುಲ್ಮಾರ್ ಮಧು ಮತ್ತಿತರರು ಉಪಸ್ಥಿತರಿದ್ದರು.
ಸಾಗರದಲ್ಲಿ ಮಿಶ್ರ ಪ್ರತಿಕ್ರಿಯೆ
ಸಾಗರ,ಜು.30: ಮಹಾದಾಯಿ ನದಿನೀರು ಹಂಚಿಕೆ ಕುರಿತು ನ್ಯಾಯಾಧಿಕರಣ ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಖಂಡಿಸಿ ಶನಿವಾರ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯಬಂದ್‌ಗೆ ಸಾಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶುಕ್ರವಾರ ರಜೆ ಇರುವ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದ ಪೋಷಕರು, ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು, ವಾಪಾಸ್ ಕರೆದುಕೊಂಡು ಹೋದ ಪ್ರಸಂಗ ನಡೆಯಿತು. ಬಸ್ ಸಂಚಾರ ಇಲ್ಲದೆ ಗ್ರಾಮಾಂತರ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಉಂಟಾಯಿತು. ಬೆಳಗ್ಗೆ 10ಗಂಟೆಯವರೆಗೆ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ನಂತರ ಏಕಾಏಕಿ ಬಸ್ ಸಂಚಾರವನ್ನು ನಿಲ್ಲಿಸಿದ್ದರಿಂದ ವಿದ್ಯಾರ್ಥಿಗಳು ವಾಪಾಸ್ ಊರಿಗೆ ತೆರಳಲು ಸಮಸ್ಯೆ ಎದುರಿಸುವಂತಾಯಿತು. ಸರಕಾರಿ ನೌಕರರ ಸಂಘ ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದ್ದರೂ ಸರಕಾರಿ ಕಚೇರಿಗಳು ತೆರೆದು ಎಂದಿನಂತೆ ಕೆಲಸ ಕಾರ್ಯಗಳು ನಡೆದವು. ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಯಿತು. ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ, ಮೆರವಣಿಗೆ ಹೋಗುವ ಸಂದರ್ಭದಲ್ಲಿ ಅನಗತ್ಯ ಸಮಸ್ಯೆ ಎದುರಿಸುವುದು ಏಕೆ ಎಂದು ಸ್ವಯಂಪ್ರೇರಿತವಾಗಿ ಮಾಲಕರು ಬಂದ್ ಮಾಡಿದ ಘಟನೆ ನಡೆಯಿತು. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ತ್ ಮಾಡಲಾಗಿತ್ತು.