×
Ad

ಸ್ವಾತಂತ್ರ ದಿನಾಚರಣೆಯ ಯಶಸ್ಸಿಗೆ ಕೆ ಜೋಡಿಸಿ: ಡಿಸಿ ವಿನ್ಸೆಂಟ್ ಡಿಸೋಜ

Update: 2016-07-30 22:49 IST

ಮಡಿಕೇರಿ, ಜು.30: ಜಿಲ್ಲಾಡಳಿತದ ವತಿಯಿಂದ ಸಂಭ್ರಮ ಮತ್ತು ಅರ್ಥಪೂರ್ಣವಾಗಿ ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸುವ ಮೂಲಕ ಸ್ವಾತಂತ್ರ ದಿನಾಚರಣೆ ಸಮಾರಂಭವನ್ನು ಯಶಸ್ಸುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದ್ದಾರೆ.

  

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯು ಸ್ವಾತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು. ಹಾಗೆಯೇ ಎಲ್ಲರೂ ತೊಡಗಿಸಿಕೊಂಡು ಅಚ್ಚುಕಟ್ಟಾಗಿ ಆಚರಿಸಲು ಕ್ರಮವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಸ್ವಾತಂತ್ರ ದಿನಾಚರಣೆ ದೇಶದ ಸಂಭ್ರಮಾಚರಣೆಯಾಗಿದ್ದು, ಸ್ವಯಂ ಪ್ರೇರಣೆಯಿಂದ ಎಲ್ಲರೂ ಭಾಗವಹಿಸಬೇಕು. ಆಗಸ್ಟ್ 15ರಂದು ಬೆಳಗ್ಗೆ ನಗರದ ಕೋಟೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಹಾಜರಾತಿಯಲ್ಲಿ ತಪ್ಪದೆ ಸಹಿ ಮಾಡಬೇಕು ಎಂದು ಅವರು ಸೂಚನೆ ನೀಡಿದರು. ಸಾಧ್ಯವಾದಷ್ಟು ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಆಗಸ್ಟ್ 14 ಮತ್ತು 15ರಂದು ದೀಪಾಲಂಕರ ಮಾಡಬೇಕು. ಪ್ಲಾಸ್ಟಿಕ್ ಧ್ವಜ ಹಾಗೂ ಹೂಗುಚ್ಚ ಬಳಸದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸುವ ಶಾಲಾ ಮಕ್ಕಳಿಗೆ ಅಂದು ಬೆಳಗ್ಗೆ ಉಪಹಾರ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಯಿತು. ಜಿಲ್ಲಾಡಳಿತದಿಂದ ಎಸೆಸೆಲ್ಸಿ, ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಶಸ್ತಿ ನೀಡುವ ವ್ಯವಸ್ಥೆಯಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

   

    

ಸ್ವಾತಂತ್ರ ದಿನಾಚರಣೆಯನ್ನು ಉತ್ತಮ ರೀತಿಯಲ್ಲಿ ಆಚರಿಸಲು ಸ್ವಾಗತ, ವೇದಿಕೆ, ಧ್ವಜಾರೋಹಣ, ಕವಾಯತು, ಸಾಂಸ್ಕೃತಿಕ, ಹಣಕಾಸು, ಆಹಾರ ಮತ್ತಿತರ ಉಪ ಸಮಿತಿಗಳನ್ನು ರಚಿಸಲಾಯಿತು. ಉಪ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ವಹಿಸಿರುವ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಉಪ ಸಮಿತಿಗಳು ತಮ್ಮ ಹಂತದಲ್ಲಿ ಸಭೆೆ ನಡೆಸಿ ತಾವು ತೆಗೆದುಕೊಂಡ ತೀರ್ಮಾನವನ್ನು ಆ.6ರೊಳಗೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು, ಆ.10ರಂದು ಎಲ್ಲ ಉಪ ಸಮಿತಿಯ ಅಧ್ಯಕ್ಷರ ಜತೆ ಸಭೆೆ ನಡೆಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ತಿಳಿಸಿದರು. ಜಿಪಂ ಮುಖ್ಯ ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಆ.15 ರಂದು ನಡೆಯುವ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಉಪ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬರೂ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಜಿಪಂ ಉಪ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಸ್ವಾಮಿ, ಉಪ ಪೊಲೀಸ್ ವರಿಷ್ಠಾಧಿಕಾರಿ ನಾಗಪ್ಪ, ಐ.ಪಿ.ಮೇದಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರನ್, ತಹಶೀಲ್ದಾರ್ ಕುಂಞಮ್ಮ, ಜಿಪಂ ಇಂಜಿನಿಯರ್ ಶಶಿಧರ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪದ್ಮಶೇಖರ ಪಾಂಡೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕುಳ್ಳಯ್ಯ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಧೀಂದ್ರ ಕುಮಾರ್, ಪ್ರಾದೇಶಿಕ ಸಾರಿಗೆ ಕಚೇರಿಯ ಇನ್‌ಸ್ಪೆೆಕ್ಟರ್ ರಾಮನಾಥ್, ಸ್ಕೌಡ್ಸ್ ಮತ್ತು ಗೈಡ್ಸ್ ಸಂಸ್ಥೆಯ ದಮಯಂತಿ, ಡಿಸಿ ಕಚೇರಿಯ ಶಿರಸ್ತೇದಾರ ಪ್ರವೀಣ್ ಕುಮಾರ್, ಅನಿಲ್ ಕುಮಾರ್, ನಾನಾ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆೆಯಲ್ಲಿ ಹಾಜರಿದ್ದು ಹಲವು ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News