ರಾಜ್ಯಕ್ಕೆ ನ್ಯಾಯ ಒದಗಿಸಲು ಒತ್ತಾಯಿಸಿ ಮನವಿ
ಕಾರವಾರ, ಜು.30: ಮಹಾದಾಯಿ ನ್ಯಾಯಾಧಿಕರಣ ತೀರ್ಪನ್ನು ಖಂಡಿಸಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಶನಿವಾರ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಂದ್ ಬಳಿಕ ಜಿಲ್ಲಾಡಳಿತ ಕಚೇರಿ ಬಳಿ ಆಗಮಿಸಿ ರಾಜ್ಯದ ಜನತೆ ಕಳೆದ ಎರಡು ವರ್ಷದಿಂದ ಕಳಸಾ ಬಂಡೂರಿ ಮಹಾದಾಯಿ ಜೋಡಣೆಗೆ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ರೈತರು ಹೋರಾಟ ನಡೆಸುತ್ತಾ ಬಂದಿದ್ದಾರೆ ಎನ್ನುವ ವಿಷಯವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಲಾಯಿತು.
ನ್ಯಾಯಾಧಿಕರಣದ ಮುಂದೆ ರಾಜ್ಯ ಸರಕಾರ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗಿದ್ದೇ ಈ ತೀರ್ಪು ಪ್ರಕಟವಾಗಲು ಕಾರಣವಾಗಿದೆ. ಮೂರು ರಾಜ್ಯಗಳ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಒಟ್ಟಾರೆ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಯೇ ಹೆಚ್ಚು ಎನ್ನುವಂತೆ ವರ್ತಿಸಿ, ರೈತರ ಹಿತಾಸಕ್ತಿಯಲ್ಲೇ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಸಾ ಬಂಡೂರಿ ನದಿಯಿಂದ 210 ಟಿಎಂಸಿ ನೀರು ನೈಸರ್ಗಿಕವಾಗಿ ಲಭ್ಯವಿದ್ದು, ಅದರಲ್ಲಿ ಕರ್ನಾಟಕ ರಾಜ್ಯಕ್ಕೆ 45ಟಿಎಂಸಿ ನೀರು ಪಡೆಯಬಹುದಾಗಿದೆ. ಕಳಸಾ ಬಂಡೂರಿಯಿಂದ ಈಗ 7.56ಟಿಎಂಸಿ ನೀರಿಗೆ ನ್ಯಾಯಾಧಿಕರಣದ ಮುಂದೆ ಬೇಡಿಕೆ ಇಟ್ಟಿದ್ದು ತಿರಸ್ಕೃತವಾಗಿದೆ. ಕರ್ನಾಟಕದಿಂದ ಹರಿದು ಗೋವಾ ರಾಜ್ಯದ ಮೂಲಕ ಅರಬ್ಬೀ ಸಮುದ್ರ ಸೇರುವ ಈ ನೀರನ್ನು ರಾಜ್ಯದ ಜನರು ಕುಡಿಯುವ ನೀರಿಗೆ, ಕೃಷಿಗೆ ಚಟುವಟಿಕೆ ಇಲ್ಲದಿರುವ ಗೋವಾಕ್ಕೆ ನೀರಿನ ಆವಶ್ಯಕತೆ ಇಲ್ಲ. ಅಷ್ಟಕ್ಕೂ ಬರಗಾಲ ಕರ್ನಾಟಕದಲ್ಲಿ ಇದೆಯೇ ಹೊರತು ಗೋವಾ ರಾಜ್ಯದಲ್ಲಿ ಇಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘು ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಹೇಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.