×
Ad

‘ಹೊಸ ಸಾಹಿತಿಗಳ ಪ್ರೋತ್ಸಾಹಕ್ಕೆ ಸರಕಾರ ಮುಂದಾಗಲಿ: ಶ್ರೀರಾಮ್

Update: 2016-07-30 23:02 IST

ಮೂಡಿಗೆರೆ, ಜು.30: ಇಂದಿನ ದಿನಗಳಲ್ಲಿ ಸಾಹಿತಿಗಳು ಆರ್ಥಿಕ ಸ್ಥಿತಿಯಲ್ಲಿ ಹಿಂದಿರುವುದರಿಂದ ಅವರು ಬರೆದ ಕವನ ಸಂಕಲನಗಳನ್ನು ಹೊರ ತರಲಾಗದೆ ಸಂಕಷ್ಟಕ್ಕೆ ಸಿಲುಕಿರುವ ನಿದರ್ಶನಗಳನ್ನು ನಾವಿಂದು ಕಾಣುತ್ತಿದ್ದೇವೆ. ಸಾಹಿತಿಗಳು ಬರೆದ ಪುಸ್ತಕಗಳನ್ನು ಬಿಡುಗಡೆಗೊಳಿಸಲು ಸರಕಾರದಲ್ಲಿ 638 ಕೋಟಿ ರೂ. ಹಣವಿತ್ತು. ಆದರೆ ಅದನ್ನು ಬೇರೆ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ಮೈಸೂರಿನ ಪುಸ್ತಕ ಪ್ರಕಾಶನದ ಮಾಲಕ ಶ್ರೀರಾಮ್ ಆರೋಪಿಸಿದರು.

ಖ್ಯಾತ ಸಾಹಿತಿ ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಮನೆ ಸಭಾಂಗಣದಲ್ಲಿ ಸಾಹಿತಿ ಪ್ರಸಾದ್ ರಕ್ಷಿದಿ ಬರೆದಿರುವ ‘ನಮ್ಮ ನಡುವಿನ ತೇಜಸ್ವಿನಿ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಅನೇಕ ಜನರು ಸಾಹಿತ್ಯ ಲೋಕಕ್ಕೆ ಕಾಲಿಡಲು ಬಯಸುತ್ತಿದ್ದರೂ,ಅದಕ್ಕೆ ಬೇಕಾದ ಪೂರಕ ಸಹಕಾರ ಸರಕಾರದಿಂದಾಗಲೀ ಜನರಿಂದಾಗಲೀ ಸಿಗುತ್ತಿಲ್ಲ. ಹೊಸ ಸಾಹಿತಿಗಳು ಮುಂದೆ ಬರಬೇಕೆಂದರೆ ಜನರ ಹಾಗೂ ಸರಕಾರದ ಸಹಕಾರ ಅತ್ಯಗತ್ಯವಾಗಿದೆ. ಪ್ರಸಾದ್ ರಕ್ಷಿದಿ ಬರೆದಿರುವ ಪುಸ್ತಕದಲ್ಲಿ ತೇಜಸ್ವಿಯವರನ್ನು ಮರು ಪರಿಚಯ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.

ನಮ್ಮ ನಡುವಿನ ತೇಜಸ್ವಿನಿ ಲೇಖಕ ಪ್ರಸಾದ್ ರಕ್ಷಿದಿ ಮಾತನಾಡಿ, ತೇಜಸ್ವಿಯವರನ್ನು ನೋಡಿದರೆ ಒಂದು ರೀತಿಯಲ್ಲಿ ಸ್ಫೂರ್ತಿ ಸಿಕ್ಕಿದಂತಾಗುತ್ತದೆ. ಅವರ ಯೋಚನೆಯ ದಿಕ್ಕುಗಳೇ ಬೇರೆ ರಿತಿಯಲ್ಲಿ ಇರುತ್ತಿದ್ದವು. ನಾವು ಮಾಡುವ ಕೆಲ ಸಣ್ಣ ಸಣ್ಣ ತಪ್ಪುಗಳನ್ನು ಬದಲಾಯಿಸಿಕೊಳ್ಳುವಂತೆ ನಮ್ಮ ದೃಷ್ಟಿಯನ್ನೇ ವಿಸ್ತರಿಸಿಕೊಳ್ಳುವಂತಹ ಮಾತುಗಳನ್ನು ಆಡುತ್ತಿದ್ದರು. ತಾನು ಬರೆದ ‘ನಮ್ಮ ನಡುವಿನ ತೇಜಸ್ವಿನಿ’ ಎಂಬ ಪುಸ್ತಕ ಈಗಾಗಲೇ ತೇಜಸ್ವಿಯಿಂದಲೇ ಹೆಸರು ಮಾಡುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ತೇಜಸ್ವಿ ಮಾತನಾಡಿ, ತೇಜಸ್ವಿಯವರ 1964ರ ಅಂದಿನ ದಿನಗಳಲ್ಲಿ ವಿಮರ್ಶಾತ್ಮಕ ಕವನಗಳು ಹೆಚ್ಚಾಗಿ ಮೂಡಿಬರುತ್ತಿತ್ತು. 90 ದಶಕ ಬಂದಾಗ ಕನ್ನಡ ನಾಡಿನ ಚರಿತ್ರೆಯೇ ಬೇರೆ ರೀತಿಯಲ್ಲಿ ಬದಲಾಗತೊಡಗಿತ್ತು. ಆದರೆ ತೇಜಸ್ವಿಯವರು ತನ್ನದೇ ಆದ ಶೈಲಿಯಲ್ಲಿ ವಿಜ್ಞ್ಞಾನ, ಸೃಷ್ಟಿಯ ಮೂಲ, ಹಾಸ್ಯ, ಜಾಗತೀಕರಣ ಸೇರಿದಂತೆ ಹಲವಾರು ರೀತಿಯ ಬರವಣಿಗೆಗಳನ್ನು ಬರೆದು ಕೊಳ್ಳುವವರಿಗೆ ಹಾಗೂ ಓದುವವರಿಗೆ ಮನಪರಿವರ್ತನೆಗೊಳ್ಳುವಂತೆ ಸಾಹಿತ್ಯ ಲೋಕವನ್ನೇ ಎತ್ತಿ ಹಿಡಿದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸರಕಾರಿಶಾಲಾ ಶಿಕ್ಷಕ ಅರವಿಂದ್ ಚಿಕ್ಕೋಡಿ, ಗಣೇಶ್, ರಘು, ಸೇರಿದಂತೆ ಪೂರ್ಣ ಚಂದ್ರ ತೇಜಸ್ವಿಯವರ ಸಹಚರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News