×
Ad

ಯೋಜನೆಗಳನ್ನು ಅನುಷ್ಠಾನ ಮಾಡದ ಅಧಿಕಾರಿಗಳು ಜೈಲಿಗೆ: ಜಿಲ್ಲಾಧಿಕಾರಿ

Update: 2016-07-30 23:03 IST

ಶಿವಮೊಗ್ಗ, ಜು.30: ಸ್ಪಷ್ಟ ನಿರ್ದೇಶನದ ಹೊರತಾಗಿಯೂ ನಿಗದಿತ ಗುರಿ ಸಾಧನೆ ಮಾಡದೆ ಸಭೆಗೆ ಆಗಮಿಸಿ ಮಾಹಿತಿಯಿಲ್ಲವೆಂದು ಸಬೂಬು ಹೇಳುವ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲ್‌ಗೆ ಕಳುಹಿಸಬಾರದೇಕೆ? ಇನ್ನು ಮುಂದೆ ಯೋಜನೆಯ ಸಮರ್ಪಕ ಅನುಷ್ಠಾನ ಮಾಡದ ಅಧಿಕಾರಿಗಳನ್ನು ಜೈಲ್‌ಗೆ ಕಳುಹಿಸುವುದು ನಿಶ್ಚಿತ ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ಕೆಲ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ನಗರದ ಡಿ.ಸಿ. ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಎಸ್‌ಸಿಪಿ-ಎಸ್‌ಟಿಪಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಉಪಯೋಜನೆಯ ನಿಯಮದ ಪ್ರಕಾರ, ಪ್ರತಿಯೊಂದು ಇಲಾಖೆಯು ತನ್ನ ವಾರ್ಷಿಕ ಅನುದಾನದಲ್ಲಿ ಶೇ.25 ರಷ್ಟನ್ನು ಎಸ್ಸಿ-ಎಸ್ಟಿ ವರ್ಗದವರಿಗೆ ಸೌಲಭ್ಯ ಕಲ್ಪಿಸಲು ಮೀಸಲಿಡುವುದು ಕಡ್ಡಾಯವಾಗಿದೆ. ಜೊತೆಗೆ ಕಾಲಮಿತಿಯಲ್ಲಿ ಈ ಸೌಲಭ್ಯವನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸುವುದು ಕಾನೂನುಬದ್ಧ್ದವಾಗಿದೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ವಿಫಲವಾದಲ್ಲಿ ಅಂತಹ ಇಲಾಖಾಧಿಕಾರಿಯ ವಿರುದ್ಧ್ದ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿ, ಆರು ತಿಂಗಳು ಜೈಲ್‌ಗೆ ಕಳುಹಿಸುವ ಕಾನೂನನ್ನು ರಾಜ್ಯ ಸರಕಾರ ರೂಪಿಸಿ ಅನುಷ್ಠಾನಗೊಳಿಸಿದೆ. ಆದಾಗ್ಯೂ ಕೆಲ ಇಲಾಖೆಗಳು ಯೋಜನೆಯ ಸಮರ್ಪಕ ಅನುಷ್ಠಾನ ಮಾಡಿಲ್ಲ. ನಿಗದಿತ ಗುರಿ ಸಾಧಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಿಶು ಅಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಳಗೇರಿ ಮಂಡಳಿ, ಪ್ರವಾಸೋದ್ಯಮ ಇಲಾಖೆ, ಮೆಸ್ಕಾಂ, ಕೆಎಂಎಫ್ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿಗಳು ಎಸ್‌ಸಿಪಿ-ಎಸ್‌ಟಿಪಿ ಯೋಜನೆಯಡಿ ನಿಗದಿತ ಗುರಿ ಸಾಧನೆ ಮಾಡಿದಿರುವುದಕ್ಕೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಇಲಾಖೆ ಅಧಿಕಾರಿಯೋರ್ವರಿಗೆ, ‘ನೀವು ಆರು ತಿಂಗಳ ಕಾಲ ಜೈಲ್‌ಗೆ ಹೋಗಬೇಕೆಂದುಕೊಂಡಿದ್ದೀರಾ?. ಹೋಗುವುದಿದ್ದರೆ ಹೇಳಿ, ಈಗಲೇ ಕಳುಹಿಸಿ ಕೊಡುತ್ತೇನೆ. ಸರಕಾರದ ಸ್ಪಷ್ಟ ಸೂಚನೆಯಿದ್ದರೂ ಏಕೆ ಸಮರ್ಪಕವಾಗಿ ಯೋಜನೆ ಅನುಷ್ಠಾನ ಮಾಡಿಲ್ಲ. ಗೊತ್ತಾಗುವುದಿಲ್ಲವೇ ನಿಮಗೆ?’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಕಾರದ ಸೌಲಭ್ಯ ಪಡೆಯಲು ಬಡವರು-ಶೋಷಿತರು ಕಚೇರಿಗಳಿಗೆ ಅಲೆದಾಡಬೇಕಾ? ಶಿಫಾರಸು ಮಾಡಿಸಬೇಕಾ? ನೀವೇ ಬಡವರಿದ್ದಲ್ಲಿಗೆ ಹೋಗಿ ಸರಕಾರದ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿ. ಈ ಗುಣವುಳ್ಳವರು ಮಾತ್ರ ಸರಕಾರಿ ಸೇವೆ ಮಾಡಲು ಅರ್ಹರು. ಉಪ ಯೋಜನೆಯಡಿ ಅರ್ಹರಿಗೆ ಕಾಲಮಿತಿಯಲ್ಲಿ ಸೌಲಭ್ಯ ತಲುಪಿಸಿ,ಸತಾಯಿಸಬೇಡಿ ಎಂದು ತಾಕೀತು ಮಾಡಿದರು. ಉಪಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಅಧಿಕಾರಿಗಳ ಪಟ್ಟಿ ಕೊಡಿ. ಅಂತಹ ಅಧಿಕಾರಿಗಳಿಗೆ ತಾನು, ಎಸ್.ಪಿ., ಸಿಇಒ ಮೂರು ಜನ ತೆರಳಿ ಹೂಮಾಲೆ ಹಾಕಿ, ಹೊಗಳಿಕೆ ಪತ್ರ ನೀಡಿ ಅಭಿನಂದಿಸುತ್ತೇವೆ ಎಂದು ವ್ಯಂಗ್ಯಭರಿತವಾಗಿ ಕೆಲ ಇಲಾಖಾಧಿಕಾರಿಗಳಿಗೆ ಕುಟುಕಿದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News