ಶಿವರಾತ್ರಿ ರಾಜೇಂದ್ರ ಜ್ಯೋತಿಯಾತ್ರೆ ಇಂದು ಸಕಲೇಶಪುರ ತಾಲೂಕು ಪ್ರವೇಶ
ಸಕಲೇಶಪುರ,ಆ.1: ಶ್ರೀಕ್ಷೇತ್ರ ಸುತ್ತೂರಿನಿಂದ ಹೊರಟಿರುವ ಶ್ರೀ ಶಿವರಾತ್ರಿ ರಾಜೇಂದ್ರ ಜ್ಯೋತಿಯಾತ್ರೆ ಆ.2 ರಂದು ಮಂಗಳವಾರ(ಇಂದು) ತಾಲೂಕು ಪ್ರವೇಶಿಸಲಿದ್ದು ಎರಡು ದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಂ.ಶಶಿಧರ್ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು, ದೇಶಾಧ್ಯಂತ ಸಂಚರಿಸುತ್ತಿರುವ ಜ್ಯೋತಿಯಾತ್ರೆಯು ಮಂಗಳವಾರ ಮದ್ಯಾಹ್ನ ಬಾಳ್ಳುಪೇಟೆಗೆ ಆಗಮಿಸಲಿದ್ದು ಸಿದ್ದಣ್ಣಯ್ಯ ಪ್ರೌಢಶಾಲೆ ಮುಂಭಾಗ ಮಂಗಳ ವಾದ್ಯಗಳು ಹಾಗೂ ಕಲಾ ತಂಡಗಳೊಂದಿಗೆ ಸ್ವಾಗತಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ದಿನ ಸಂಜೆ 4 ಗಂಟೆಗೆ ಬಾಗೆ ಗ್ರಾಮದಲ್ಲಿರುವ ಜೆಎಸ್‌ಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಾಗತ ಕೋರಲಾಗುವುದು. ಸಂಜೆ ಅಲ್ಲಿಯೇ ವಾಸ್ತವ ಹೂಡಿ ಮರುದಿನ ಬುಧವಾರ ಬೆಳಗ್ಗೆ 10 ಗಂಟೆಗೆ ಪಟ್ಟಣ ಪ್ರವೇಶಿಸುವುದು. ಸಕಲೇಶಪುರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪೂರ್ಣಕುಂಭ, ವಿವಿಧ ಕಲಾ ತಂಡಗಳು, ಮಂಗಳ ವಾದ್ಯಗಳು ಹಾಗೂ ಭಕ್ತಾದಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಲಾಗುವುದು.
ನಂತರ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ವಿವಿಧ ಗಣ್ಯರು, ಅಧಿಕಾರಿಗಳು, ವೀರಶೈವ ಸಮಾಜದ ಮುಖಂಡರು, ವಿದ್ಯಾರ್ಥಿಗಳು, ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಎಚ್.ಎಸ್.ಧರ್ಮಪ್ಪ, ಬಿ.ಡಿ.ಬಸವಣ್ಣ, ಜೆಎಸ್‌ಎಸ್ ವಿದ್ಯಾ ಸಂಸ್ಥೆ ಅಧೀಕ್ಷಕ ಮಂಜುನಾಥ್ ಇದ್ದರು.