ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದ ತೊಂದರೆ: ಸರಿಪಡಿಸದಿದ್ದರೆ ಉಗ್ರ ಹೋರಾಟ
ಸಕಲೇಶಪುರ,ಆ.1: ಎತ್ತಿನಹೊಳೆ ತಿರುವು ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸ್ಥಿತಿ ಸಂಪುರ್ಣ ಅಸ್ತವ್ಯಸ್ಥವಾಗಿದ್ದು ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಎತ್ತಿನಹೊಳೆ ಯೋಜನೆ ಹಿಡುವಳಿದಾರರ ಹಾಗೂ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಸ್ವಾದೀಶ್ ಮೂರ್ತಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ನಿಯಮಾನುಸಾರ ಕಾಮಗಾರಿ ನಡೆಸದ ಕಾರಣ ಈ ಭಾಗದದಲ್ಲಿ ಅರಣ್ಯ, ಪರಿಸರ ನಾಶ ಉಂಟಾಗಿರುವ ಜೊತೆಗೆ ಸಂಚಾರಿ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಜನರು ಓಡಾಡುವ ರಸ್ತೆ ಪಕ್ಕದಲ್ಲಿಯೇ ಭಾರಿ ಗಾತ್ರದ ಪೈಪ್‌ಗಳನ್ನು ಹೂಳಲಾಗಿದ್ದು ಅವುಗಳ ಬಾಯಿ ತೆರೆದ ಸ್ಥಿತಿಯಲ್ಲಿಯೇ ಇರುವುದರಿಂದ ಮರಣ ಬಾವಿಗಳಾಗಿ ಮಾರ್ಪಟ್ಟಿವೆ. ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಅಗೆದು ಹಾಗೆಯೇ ಬಿಟ್ಟಿರುವ ಪರಿಣಾಮ ಮಳೆಯ ನೀರು, ಕೆಸರು ಮಿಶ್ರಿತವಾಗಿ ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದಾಗಿ ಜನ ಓಡಾಡಲು, ವಾಹನಗಳು ಸಂಚರಿಸಲು ಕಷ್ಟವಾಗಿದೆ ಎಂದು ದೂರಿದರು.
ಕಾಮಗಾರಿ ಹೆಸರಿನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಿಡಿಸಲಾಗುತ್ತಿದೆ. ಭೀಮೇಶ್ವರನ ಗುಡಿ ಸಮೀಪ ರೈಲ್ವೆ ಮಾರ್ಗ ಹಾದುಹೋಗಿದ್ದು ಇದಕ್ಕೆ ಸಮಚಕಾರ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಭಾಗದ ಮನೆಗಳು ಸ್ಫೊಟಕಗಳ ಸಿಡಿತಕ್ಕೆ ಬಿರುಕು ಬಿಟ್ಟಿದ್ದು ಶಿಥಿಲಾವಸ್ಥೆಗೆ ತಲುಪಿವೆ. ಶಾಲೆ, ಅಂಗನವಾಡಿ ಕೇಂದ್ರಗಳ ಸಮೀಪವೇ ದೊಡ್ಡ ಗುಂಡಿಗಳನ್ನು ತೋಡಿ ಹಾಗೆಯೇ ಬಿಟ್ಟಿರುವುದರಿಂದ ಮಕ್ಕಳು ಓಡಾಡಲು ಕಷ್ಟವಾಗಿದೆ. ಯಾವಾಗ ಏನು ಅನಾಹುತ ಸಂಭವಿಸುತ್ತದೋ ಎಂಬ ಭಯ ಮನೆ ಮಡಿದೆ ಎಂದರು.
ಸಂಬಂಧಿಸಿದವರು ಕೂಡಲೆ ಎಚ್ಛೆತ್ತುಕೊಂಡು ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕಿದೆ. ಎಲ್ಲಾ ಕಾರ್ಯಗಳನ್ನು ಒಟ್ಟಿಗೆ ಮಾಡಲು ಸಆಧ್ಯವಾಗದಿದ್ದರೂ ತಾತ್ಕಾಲಿಕವಾಗಿ ಗುಂಡಿ ಮುಚ್ಚುವುದು, ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವುದು, ಬಾಯ್ತೆರೆದು ನಿಂತಿರುವ ಬಾರಿ ಗಾತ್ರದ ಪೈಪ್‌ಗಳ ಬಾಯಿ ಮುಚ್ಚುವ ಕೆಲಸ ಮಾಡಬೇಕು. ಈ ಕೆಲಸಗಳನ್ನು ವಾರದೊಳಗೆ ನಡೆಸಲು ಮುಂದಾಗದಿದ್ದರೆ ವಿವಿಧ ಸಂಘಟನೆಗಳು ಹಾಗು ಸಂತ್ರಸ್ಥರ ಸಹಕಾರದೊಂದಿಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೊಷ್ಟಿಯಲ್ಲಿ ಭೂಷಣ್ ಗಾನದಹೊಳೆ, ಕಾರ್ತಿಕ್, ನಿಶಾಂತ್, ಮಾವಿನಕೋಲು ಚಂದ್ರಶೇಖರ್ ಇದ್ದರು.