ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಹಕ್ಕು ಪತ್ರ ನೀಡಿಲ್ಲ: ಆರೋಪ
ಸೊರಬ, ಆ.1: ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಿರೇಶಕುನ ಗ್ರಾಮದ ಸರ್ವೇ ನಂ. 113ರಲ್ಲಿನ ರಂಗನಾಥ ಸ್ವಾಮಿ ದೇವಸ್ಥಾನದ ಹೆಸರಿನಲ್ಲಿದ್ದ 365 ಎಕರೆ 29 ಗುಂಟೆ ಜಮೀನನ್ನು ಸರಕಾರ ವಶಕ್ಕೆ ಪಡೆದಿದ್ದರು ಇದೆ ಜಮೀನಿನಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ಬಡವರಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎಂದು ತಾಲೂಕು ಬಗರ್ ಹುಕುಂ ರೈತ ಹೋರಾಟ ಸಮಿತಿ ಸಂಚಾಲಕ ಟಿ.ರಾಜಪ್ಪ ಮಾಸ್ತರ್ ಆರೋಪಿಸಿದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರದ ಆದೇಶದ ಪ್ರಕಾರ ಸಕ್ರಮಕ್ಕಾಗಿ 1999-2000 ರಲ್ಲಿ ಇಲ್ಲಿನ ನಿವಾಸಿಗಳು ತಹಶೀಲ್ದಾರ್ ಅವರಿಗೆ 641 ಜನರು 94ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ವರೆಗೂ ಹಕ್ಕು ಪತ್ರ ನೀಡದೆ ಸರಕಾರ ವಂಚಿಸಿದೆ ಎಂದು ದೂರಿದರು.
ಅರಣ್ಯ ಹಕ್ಕು ಕಾಯ್ದೆಯನ್ವಯ ಭೂ ಸಕ್ರಮಕ್ಕಾಗಿ ಎರಡು ವರ್ಷಗಳ ಹಿಂದೆಯೇ ತಾಲೂಕಿನಲ್ಲಿ 23,530 ಅರ್ಜಿಗಳು ಸಲ್ಲಿಕೆಯಾಗಿವೆ, ಇದರಲ್ಲಿ 41 ಜನರಿಗೆ ಮಾತ್ರ ಹಕ್ಕು ಪತ್ರ ವಿತರಿಸಿದ್ದು, ಇನ್ನುಳಿದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೇ, ಇನ್ನೂ ಗ್ರಾಪಂ ಮಟ್ಟದಲ್ಲಿಯೇ ಉಳಿದುಕೊಂಡಿವೆ. ಡಿಸೆಂಬರ್ ಒಳಗೆ ಪರಿಶೀಲನೆ ಮಾಡುವಂತೆ ಆದೇಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಾದ್ಯಂತ ದಲಿತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು, ಹಿಂದೂತ್ವ ಪ್ರತಿಪಾದಿಸುವ ಕೇಂದ್ರದ ಬಿಜೆಪಿ ಸರಕಾರ ಅಸಹಿಷ್ಣುತೆ ತಡೆಗಟ್ಟುವಲ್ಲಿ ವಿಫಲವಾಗಿದೆ. ಧರ್ಮ ಕೇಂದ್ರಿತ ವಿಚಾರಗಳನ್ನು ದೇಶದ ಬಹು ಜನರ ಮೇಲೆ ಹೇರುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ವ್ಯವಸ್ಥೆ ನಿರ್ಮಾಣವಾಗಿದೆ, ಇಂದು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಉಂಟಾಗಿದು,್ದ ಆಳುವ ಸರಕಾರಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಕಂಡು ಹಿಡಿಯದಿದ್ದರೆ ಪ್ರಜಾಪ್ರಭುತ್ವ ಅವನತಿಯ ದಾರಿ ಹಿಡಿಯಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಈ ಗೋಷ್ಠಿಯಲ್ಲಿ ಟಿಪ್ಪು ಅಭಿಮಾನಿ ಮಾಹಾ ವೇದಿಕೆ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಡಿಎಸ್ಸೆಸ್ ತಾಲೂಕು ಸಂಚಾಲಕ ನರೇಂದ್ರ, ಸೈಯದ್ ಮುಬಾರಿಸ್, ಅಕ್ರಂ, ಮುಹಮ್ಮದ್ ಗೌಸ್, ಮಹೇಶ ಉಪಸ್ಥಿತರಿದ್ದರು.