ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಅಗತ್ಯ: ನ್ಯಾ.ಪವನೇಶ್
ಮಡಿಕೇರಿ, ಆ.1: ಆಧುನಿಕತೆಯ ಭರಾಟೆಯಲ್ಲಿ ಕಾಂಕ್ರಿಟೀಕರಣ ಮೇಲುಗೈ ಸಾಧಿಸುತ್ತಿದ್ದು, ಇದನ್ನು ತಪ್ಪಿಸಲು ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಒಂದನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್.ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ರಾಜರಾಜೇಶ್ವರಿ ವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಪಂ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮ ಹಾಗೂ ಕಾನೂನು ಶಿಬಿರಕ್ಕೆ ಒಂದನೆ ಅಪರ ಜಿಲ್ಲಾ ಮತ್ತು ಸತ್ರನ್ಯಾಯಾಧೀಶ ಪವನೇಶ್.ಡಿ ಅವರು ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ಪ್ರಜೆಯು ಪರಿಸರದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಮುಂದಿನ ಪೀಳಿಗೆ ಆರೋಗ್ಯವಂತ ಸಮಾಜದಲ್ಲಿ ಬಾಳಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಾಸುದೇವ ಅವರು ಮಾತನಾಡಿ, ಆಹಾರ, ನೀರು, ವಸತಿ ಇಲ್ಲದೆ ಬದುಕಲು ಸಾಧ್ಯವಾಗಬಹುದು. ಆದರೆ ಶುದ್ಧ ಗಾಳಿ ಇಲ್ಲದೆ ಕ್ಷಣ ಮಾತ್ರ ಬದುಕಲು ಅಸಾಧ್ಯವಾಗಿದ್ದು, ಶುದ್ಧ ಗಾಳಿಯನ್ನು ಪಡೆಯಲು ಪರಿಸರ ಸಂರಕ್ಷಣೆ ಅಗತ್ಯವಾಗಿದೆ ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಮೋಹನ್ ಪ್ರಭು ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಲ್ಲಿ ಪರಿಸರದ ಮೇಲೆ ಕಾಳಜಿ ಬರುವಂತಹ ಶಿಕ್ಷಣ ಕೊಡಬೇಕು.ಮನೆ, ಶಾಲೆಗಳಲ್ಲಿ ಗಿಡ, ಮರಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಮಾನಸಿಕ ತಜ್ಞ ಎನ್.ವಿ.ರೂಪೇಶ್ ಗೋಪಾಲ್ ಅವರು ಉಪನ್ಯಾಸ ನೀಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಸಿ.ಟಿ.ಜೋಸೆಫ್, ಕೆ.ಟಿ.ಬೇಬಿ ಮ್ಯಾಥ್ಯೂ, ಪರಿಸರ ಇಲಾಖೆ ಅಧಿಕಾರಿ ಜಿ.ಆರ್.ಗಣೇಶನ್, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.