×
Ad

ಯುವ ಸಮೂಹ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿ: ವಿಜಯವಾಮನ್

Update: 2016-08-02 22:10 IST

 ಸಾಗರ, ಆ.2: ಬದಲಾದ ದಿನಮಾನಗಳಲ್ಲಿ ಮಾತು ಪಲ್ಲಟಗೊಳ್ಳುತ್ತಿದ್ದು, ಸ್ವರ ಕಳೆದು ಹೋಗುತ್ತಿದೆ. ಚಿಹ್ನೆಗಳ ಮೂಲಕ ಮಾತನಾಡುವುದನ್ನು ಕಲಿತುಕೊಂಡಿದ್ದೇವೆ. ಇದರಿಂದ ಪ್ರತ್ಯಕ್ಷ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಬಿ.ಆರ್.ವಿಜಯವಾಮನ್ ಹೇಳಿದರು. ಇಲ್ಲಿನ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಮಂಗಳವಾರ ಪ್ರಜ್ಞಾರಂಗ ತಂಡ ಹಾಗೂ ಥಿಯೇಟರ್ ದಿ-ಆಕ್ಟ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ರೋಹಿತ್ ವೇಮುಲಾ ಬದುಕು ಆಧಾರಿತ ನಾಟಕ ‘ನಕ್ಷತ್ರದ ಧೂಳು’ ಪ್ರದರ್ಶನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತದಲ್ಲಿ ಶೇ. 80ರಷ್ಟು ಭಾಷೆಗಳು ನೇಪಥ್ಯಕ್ಕೆ ಸೇರಿದ್ದು, ಗ್ರಾಮೀಣ ಭಾಗದ ಭಾಷೆಗಳು ಸ್ಮತಿಪಲಟದಿಂದ ಮಾಸಿ ಹೋಗಿವೆೆ. ಈಮೇಲ್, ಫೇಸ್‌ಬುಕ್, ಇಂಟರ್‌ನೆಟ್‌ಗಳಲ್ಲಿ ಫೇಸ್‌ಲೆಸ್ ಸಂಭಾಷಣೆಗೆ ಯುವಜನಾಂಗ ಮಾರು ಹೋಗಿದೆ. ನಮ್ಮನ್ನು ಮೂರ್ಖರನ್ನಾಗಿಸುವ ವ್ಯವಸ್ಥೆಯ ವಿರುದ್ಧ ಸಿಡಿದು ನಿಲ್ಲುವವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ ಎಂದರು. ತಂತ್ರಗಾರಿಕೆಯಿಂದ ಅನ್ಯಾಯವನ್ನು ಪ್ರತಿಭಟಿಸುವವರನ್ನು ಮೂರ್ಖರನ್ನಾಗಿಸುವ, ಕೈಕಾಲು ಅಲ್ಲಾಡದಂತೆ ಮಾಡುವ, ಜೈಲಿಗೆ ಕಳುಹಿಸುವ, ನೇಣಿಗೆ ಶರಣಾಗುವಂತೆ ಮಾಡುವ ಕೆಲಸ ಪ್ರಪಂಚದಾದ್ಯಂತ ನಡೆಯುತ್ತಿದೆ. ಇತ್ತೀಚಿನ ದಿನಮಾನಗಳಲ್ಲಿ ಭಾರತದಲ್ಲಿ ಸಹ ಇದು ಹೆಚ್ಚುತ್ತಿದೆ. ಹೀಗೆ ತುಳಿತಕ್ಕೆ ಒಳಗಾದವರ ಸಾಲಿಗೆ ಯುವಕ ರೋಹಿತ್ ವೇಮುಲಾ ಸಹ ಸೇರುತ್ತಾರೆ ಎಂದು ತಿಳಿಸಿದರು.

ಪಿಎಚ್‌ಡಿ ಮಾಡಿ ಉನ್ನತ ಸಾಧನೆಯ ಕನಸು ಕಂಡಿದ್ದ ರೋಹಿತ್ ವೇಮುಲಾ ಪ್ರಭುತ್ವದ ದಬ್ಬಾಳಿಕೆಯಿಂದ ನಲುಗಿ ಹೋದವರು. ಹಿಂದಿನಿಂದಲೂ ಕೈಲಾಗದವರು, ನತದೃಷ್ಟರ ಮೇಲೆ ದಬ್ಬಾಳಿಕೆ ಮಾಡಿಕೊಂಡು ಬಂದ ಇತಿಹಾಸ ನಮ್ಮ ಮುಂದಿದೆ. ಅದರ ಮುಂದುವರಿದ ಭಾಗ ರೋಹಿತ್ ವೇಮುಲಾ ಅವರ ಸಾವು. ವೇಮುಲಾ ಅವರ ಸಾವು ಮತ್ತು ಬದುಕು ಯುವ ಸಮೂಹಕ್ಕೆ ಮಾದರಿಯಾಗಬೇಕು. ಕವಿತೆ, ನಾಟಕ ಮೂಲಕ ಅದು ಯುವ ಸಮೂಹಕ್ಕೆ ತಲುಪಿ, ಅವರು ಸಹ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತೆ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಜ್ಞಾರಂಗ ತಂಡದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ , ಹರ್ಷಕುಗ್ವೆ ಮತ್ತು ಸನ್‌ಜ್ಯೋತಿ ರಚಿಸಿರುವ ರೋಹಿತ್ ವೇಮುಲಾ ಬದುಕು ಆಧರಿಸಿದ ‘ನಕ್ಷತ್ರದ ಧೂಳು’ ನಾಟಕ ಸಮಾಜದ ಶಿಕ್ಷಣ ವಿಭಾಗದಲ್ಲಿ ನಡೆಯುತ್ತಿರುವ ಬೇರೆಬೇರೆ ಬೆಳವಣಿಗೆ ಮೇಲೆ ಬೆಳಕು ಚೆಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪುರಂದರ ಗೆಣಸಿನಕುಣಿ ಹಾಗೂ ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು. ಲಕ್ಷ್ಮೀನಾರಾಯಣ್ ಅಭಿನಂದಿತರ ಪರ ಮಾತನಾಡಿದರು. ಪರಮೇಶ್ವರ ಆಲಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕಿರಣ್ ಮಾರಶೆಟ್ಟನ ಹಳ್ಳಿ ಅಭಿನಯದಲ್ಲಿ ‘ನಕ್ಷತ್ರದ ಧೂಳು’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News