×
Ad

ಪೌರಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಧರಣಿ

Update: 2016-08-02 22:13 IST

ಶಿವಮೊಗ,ಆ.2: ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಣೆ ಮಾಡುತ್ತಿರುವ ಪೌರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರ ಕಾರ್ಮಿಕರ ಸಂಘಗಳಿಂದ ಮಂಗಳವಾರ ಜಂಟಿಯಾಗಿ ನಗರದ ಡಿ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆಂದು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನಿಯೋಜಿಸಿಕೊಳ್ಳಲಾಗಿದೆ. ಇವರಿಗೆ ಕೆಲಸ ನೀಡಿರುವ ಪಾಲಿಕೆಯ ಆಯುಕ್ತರು ಇಲ್ಲಿಯವರೆಗೂ ಕಾರ್ಮಿಕರ ಭವಿಷ್ಯ ನಿಧಿ, ಕನಿಷ್ಠ ವೇತನ, ಇಎಸ್‌ಐ ಮತ್ತು ಕಾರ್ಮಿಕರಿಗೆ ರಕ್ಷಣಾ ವ್ಯವಸ್ಥೆ ಬಗ್ಗೆ ಸರಿಯಾದ ಮಾಹಿತಿ ಪಡೆಯದೆ ಗುತ್ತಿಗೆದಾರರಿಗೆ ಪ್ರತೀ ತಿಂಗಳ ಸ್ವಚ್ಛತಾ ಕೆಲಸದ ಮೊತ್ತ ಪಾವತಿಸುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಮೊದಲು ಕಾರ್ಮಿಕರಿಗೆ ಭವಿಷ್ಯನಿಧಿ - ಇಎಸ್‌ಐ ಹಣ ವರ್ಗಾವಣೆಯಾಗಿರುವುದನ್ನು ಪಾಲಿಕೆ ಆಡಳಿತ ಖಚಿತಪಡಿಸಿಕೊಳ್ಳಬೇಕು. ಆನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು. ಆದರೆ ಪಾಲಿಕೆಯಲ್ಲಿ ಈ ಕೆಲಸವಾಗುತ್ತಿಲ್ಲ. ಕಾರ್ಮಿಕರಿಗೆ ಇಎಸ್‌ಐ, ಭವಿಷ್ಯನಿಧಿ ಪಾವತಿಯಾಗದಿದ್ದರೂ, ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಗುತ್ತಿಗೆದಾರರೊಂದಿಗೆ ಪಾಲಿಕೆ ಅಧಿಕಾರಿಗಳು ಶಾಮಿಲಾಗಿದ್ದಾರೆ. ಕಾರ್ಮಿಕರಿಗೆ ಅನೇಕ ವರ್ಷಗಳಿಂದ ಪಿಎಫ್ ಹಣ ಕಟ್ಟದೆ ಗುತ್ತಿಗೆದಾರರು ವಂಚಿಸುತ್ತಿದ್ದರು, ಅವರ ವಿರುದ್ಧ ಕ್ರಮ ಜರಗಿಸದೆ ನಿಯಮಿತವಾಗಿ ಅವರಿಗೆ ಬಿಲ್ ಪಾವತಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಇತ್ತೀಚೆಗೆ ಮಹೇಶ ಎಂಬ ಕಾರ್ಮಿಕ ಮೃತಪಟ್ಟಿದ್ದು, ಆತನಿಗೆ ಸಿಗಬೇಕಾದ ಸೌಲಭ್ಯವನ್ನು ನೀಡದೆ ಗುತ್ತಿಗೆದಾರರು ವಂಚಿಸಿದ್ದಾರೆ. ಕಳೆದ 10 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರನೋರ್ವ ಕಾರ್ಮಿಕರ ಹಿತಾಸಕ್ತಿಯನ್ನು ಗಾಳಿಗೆ ತೂರಿ ಸರ್ವಾಧಿಕಾರಿ ಧೋರಣೆಯಿಂದ ಕಾರ್ಮಿಕರನ್ನು ಬೆದರಿಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಪ್ರತಿಭಟನೆಯಲ್ಲಿ ಸಂವಿಧಾನ ಹಕ್ಕುಗಳ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಬಿ.ಎ.ಬಾನುಪ್ರಸಾದ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಆರ್.ರಂಗಪ್ಪ, ಮುಖಂಡರಾದ ಎ.ಗಂಗಾಧರ್, ಬಿ.ಎ. ಹರೀಶ್ ಬಾಬು, ಕೆ. ಜೀವನ್, ಸಾಲಮ್ಮ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News