×
Ad

‘ಹಿನ್ನೀರಿನ ಸಂತ್ರಸ್ತರ ನೋವಿಗೆ ಸರಕಾರ ತಕ್ಷಣ ಸ್ಪಂದಿಸಲಿ’ ಪರಿಸರ ಕುರಿತು ಕಾರ್ಯಾಗಾರ

Update: 2016-08-02 22:14 IST

ಸಾಗರ , ಆ.2: ನಾಡಿಗೆ ವಿದ್ಯುತ್ ನೀಡಲು ಸರ್ವಸ್ವವನ್ನೂ ಕಳೆದುಕೊಂಡಿರುವ ಹಿನ್ನೀರಿನ ಜನರು ಈಗ ಕತ್ತಲಿನಲ್ಲಿ ದಿನಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.

ತಾಲೂಕಿನ ತುಮರಿಯ ಕಳಸವಳ್ಳಿಯಲ್ಲಿ ಗೋಮಾಳ ಉಳಿಸಿ ಹೋರಾಟದ ಸ್ಮರಣಾರ್ಥ ಗ್ರಾಮ ಅರಣ್ಯ ಸಮಿತಿ, ಲಕ್ಷವೃಕ್ಷ ಆಂದೋಲನಾ, ಪರಿಸರಕೂಟ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಿಸರ ಪರಿಸ್ಥಿತಿ ಕುರಿತು ವಿಶೇಷ ಸಮಾಲೋಚನಾ ಕಾರ್ಯಾಗಾರವನ್ನು ಜೀವವೈವಿಧ್ಯತಾ ವನದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಹಿನ್ನೀರಿನ ಸಂತ್ರಸ್ತ ಜನರ ನೋವಿಗೆ ಸರಕಾರ ತಕ್ಷಣ ಸ್ಪಂದಿಸಬೇಕು. ವಿದ್ಯುತ್ ಉತ್ಪಾದನೆಯಿಂದ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹಿಸುತ್ತಿರುವ ಕೆಪಿಸಿ ಈ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೋಲಾರ್ ವಿದ್ಯುತ್ ಸ್ಥಾವರ ಅಳವಡಿಸಿ, ದಿನದ 24 ಗಂಟೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ತುರ್ತು ಗಮನ ನೀಡಬೇಕು ಎಂದು ಒತ್ತಾಯಿಸಿದರು. ಹಿಂದೆ ಮೈಸೂರು ಪೇಪರ್ ಮಿಲ್ ಅನೇಕ ಕಡೆಗಳಲ್ಲಿ ನೆಡುತೋಪುಗಳನ್ನು ನಿರ್ಮಾಣ ಮಾಡಿದೆ. ನೆಡುತೋಪು ಹಾಳು ಬೀಳುತ್ತಿದ್ದು, ಎಂಪಿಎಂ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಸಹಯೋಗದೊಂದಿಗೆ ಸ್ವಾಭಾವಿಕ ಅರಣ್ಯ ಬೆಳೆಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು. ಶರಾವತಿ ಹಿನ್ನೀರಿನ ಭಾಗದಲ್ಲಿ ಕಾಡುಪ್ರಾಣಿಗಳಿಂದ ಸಾಕಷ್ಟು ಬೆಳೆಗಳು ನಾಶವಾಗುತ್ತಿವೆೆ. ಅಡಿಕೆ ತೋಟಗಳಿಗೆ ಕಾಡುಕೋಣ, ಮಂಗಗಳು ನುಗ್ಗಿ ಪೂರ್ಣ ಬೆಳೆಯನ್ನು ನಾಶಪಡಿಸುತ್ತಿವೆೆ. ಸಾವಿರಾರು ಅಡಿಕೆ ಮರಗಳು ನಾಶವಾಗಿವೆೆ. ಅರಣ್ಯ ಹಾಗೂ ಕಂದಾಯ ಇಲಾಖೆ ತಕ್ಷಣ ಸರ್ವೇ ನಡೆಸಿ ಬೆಳೆಗಾರರಿಗೆ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳು ಜಮೀನು ಪ್ರವೇಶಿಸದಂತೆ ಸೌರಬೇಲಿಯನ್ನು ನಿರ್ಮಿಸಿಕೊಳ್ಳಲು ಅಗತ್ಯ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ು ಕಳಸವಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಗಂದೂರು ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್.ಪಿ.ಶೇಷಗಿರಿ ಭಟ್, ಪರಿಸರ ಕಾರ್ಯಕರ್ತರಾದ ಅನಂತರಾಮು ಹಾರೆಗೊಪ್ಪಸ, ಕವಲಕೋಡು ವೆಂಕಟೇಶ್, ಆನೆಗುಳಿ ಸುಬ್ರಾವ್, ಅರಣ್ಯ ಇಲಾಖೆಯ ಪ್ರವೀಣಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News